Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಗ್ರಾಮೀಣ ಬದುಕಿನ ಸಾರಥಿ ಶಾಫಿ ಹಾಜಿ ಖಂಡಿಗೆಗೆ ಸ್ವಾತಂತ್ರ್ಯೋತ್ಸವ ಸನ್ಮಾನ

ಪೆರ್ಲ: ಗ್ರಾಮೀಣ ಪ್ರದೇಶದ ಜನರಿಗೆ ನಗರ ಹಾಗೂ ಪೇಟೆ-ಪಟ್ಟಣಗಳೊಂದಿಗೆ ಸುಗಮ ಸಾರಿಗೆ ಸಂಪರ್ಕ ಕಲ್ಪಿಸಿ, ಸುಮಾರು ಮೂರೂವರೆ ದಶಕಗಳ ಕಾಲ ಸಾರಿಗೆ ಉದ್ಯಮದ ಮೂಲಕ ಸಮಾಜಮುಖಿ ಸೇವೆ ಸಲ್ಲಿಸಿದ ಶಾಫಿ ಹಾಜಿ ಖಂಡಿಗೆ ಅವರನ್ನು ಎಣ್ಮಕಜೆ ಗ್ರಾಮ ಪಂಚಾಯತ್ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಖಂಡಿಗೆಯ ಅಬೂಬಕ್ಕರ್ ಹಾಜಿ ಹಾಗೂ ಖದೀಜ ದಂಪತಿಗಳ ಸುಪುತ್ರರಾಗಿ, ಕೃಷಿ ಪರಂಪರೆಯ ಕುಟುಂಬದಲ್ಲಿ ಜನಿಸಿದ ಶಾಫಿ ಹಾಜಿ ಅವರು ಬಾಲ್ಯದಿಂದಲೇ ಪರಿಶ್ರಮ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿಯನ್ನು ಜೀವನದ ಆದರ್ಶಗಳನ್ನಾಗಿ ರೂಪಿಸಿಕೊಂಡವರು. ಬೇಂಗಪದವಿನಲ್ಲಿ ಸಂಸಾರದ ಜವಾಬ್ದಾರಿಯನ್ನು ಹೊತ್ತುಕೊಂಡು ವ್ಯಾಪಾರೋದ್ಯಮಕ್ಕೆ ಕಾಲಿಟ್ಟ ಅವರು, ಗ್ರಾಮೀಣ ಜನತೆಯ ನಿತ್ಯಜೀವನಕ್ಕೆ ಅಗತ್ಯವಾದ ವಸ್ತುಗಳನ್ನು ಒದಗಿಸುವುದರ ಜೊತೆಗೆ, ಕೃಷಿಕರ ಉತ್ಪನ್ನಗಳನ್ನು ಖರೀದಿಸಿ ಅವರ ಆರ್ಥಿಕ ಬದುಕಿಗೂ ಆಸರೆಯಾದರು.

ಗ್ರಾಮೀಣ ಬದುಕಿನ ನಾಡಿಮಿಡಿತವನ್ನು ಆಳವಾಗಿ ಅರಿತಿದ್ದ ಶಾಫಿ ಹಾಜಿ, “ಜನರ ಅಗತ್ಯವೇ ನಮ್ಮ ಸೇವೆಯ ದಾರಿ” ಎಂಬ ಮನೋಭಾವದೊಂದಿಗೆ ತಮ್ಮ ಸೇವೆಯನ್ನು ಹಲವು ಕ್ಷೇತ್ರಗಳಿಗೆ ವಿಸ್ತರಿಸಿದರು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ಸಾರಿಗೆ ಸಂಪರ್ಕದ ಕೊರತೆಯಿಂದ ಜನರು ಎದುರಿಸುತ್ತಿದ್ದ ಸಂಕಷ್ಟವನ್ನು ಮನಗಂಡ ಅವರು, ಗ್ರಾಮಗಳನ್ನು ಪೇಟೆ-ಪಟ್ಟಣಗಳೊಂದಿಗೆ ಬೆಸೆಯುವ ಮಹತ್ವದ ಸಂಕಲ್ಪ ಕೈಗೊಂಡರು.


ಈ ಸಂಕಲ್ಪದ ಫಲವಾಗಿ 1990ರಲ್ಲಿ ‘ಖಂಡಿಗೆ ಟ್ರಾವೆಲ್ಸ್’ ಎಂಬ ಖಾಸಗಿ ಸಾರಿಗೆ ಬಸ್ ಸೇವೆಯನ್ನು ಆರಂಭಿಸಿದರು. ಬೇಂಗಪದವು, ಪೂವನಡ್ಕ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಜನಜೀವನದಲ್ಲಿ ಈ ಸಾರಿಗೆ ಸೇವೆ ಹೊಸ ಚೈತನ್ಯ ಮೂಡಿಸಿತು.

ಖಂಡಿಗೆ ಟ್ರಾವೆಲ್ಸ್ ಕೇವಲ ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವ ಸಾರಿಗೆ ವ್ಯವಸ್ಥೆಯಾಗಿರಲಿಲ್ಲ. ಅದು ಗ್ರಾಮ ಮತ್ತು ನಗರದ ನಡುವಿನ ಸಂಪರ್ಕ ಸೇತುವೆಯಾಗಿ ರೂಪುಗೊಂಡಿತು.

ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ತೆರಳಿ ಶಿಕ್ಷಣ ಮುಂದುವರಿಸಲು, ಉದ್ಯೋಗಿಗಳಿಗೆ ನಗರ ಪ್ರದೇಶಗಳಿಗೆ ತೆರಳಿ ಬದುಕು ಕಟ್ಟಿಕೊಳ್ಳಲು ಹಾಗೂ ವ್ಯಾಪಾರಿಗಳು, ಕೃಷಿಕರು, ಮಹಿಳೆಯರು ಮತ್ತು ಹಿರಿಯರಿಗೆ ತಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸಲು ಈ ಸಾರಿಗೆ ಸೇವೆ ಮಹತ್ತರ ಆಸರೆಯಾಯಿತು.

ಸುಮಾರು ಮೂರೂವರೆ ದಶಕಗಳ ಕಾಲ ಗ್ರಾಮೀಣ ಜನತೆಯ ಸಾರಿಗೆ ಅಗತ್ಯಗಳನ್ನು ಅರಿತು ನಿರಂತರವಾಗಿ ಸೇವೆ ಸಲ್ಲಿಸಿದ ಶಾಫಿ ಹಾಜಿ ಅವರು, ಸಾರಿಗೆ ಉದ್ಯಮವನ್ನು ಕೇವಲ ವೃತ್ತಿಯಾಗಿ ಕಾಣದೆ ಸಮಾಜ ಸೇವೆಯ ಪರಿಣಾಮಕಾರಿ ಮಾಧ್ಯಮವನ್ನಾಗಿ ಪರಿವರ್ತಿಸಿದವರು.

ಸರಳತೆ, ಬದ್ಧತೆ, ಜನಪರ ಕಾಳಜಿ ಮತ್ತು ನಿರಂತರ ಪರಿಶ್ರಮವೇ ಅವರ ಸೇವಾ ಪಯಣದ ಪ್ರಮುಖ ಶಕ್ತಿಗಳಾಗಿವೆ. ಗ್ರಾಮೀಣ ಜನರ ಬದುಕಿನಲ್ಲಿ ಸಾರಿಗೆ ಸಂಪರ್ಕದ ಮಹತ್ವವನ್ನು ಅರಿತು ಅದನ್ನು ಕಾರ್ಯರೂಪಕ್ಕೆ ತಂದ ಅವರ ಸೇವೆ, ಪೂವನಡ್ಕ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನಮಾನಸದಲ್ಲಿ ವಿಶೇಷ ಗೌರವದ ಸ್ಥಾನವನ್ನು ಕಲ್ಪಿಸಿದೆ.

ಪರಿಶ್ರಮದಿಂದ ಆರಂಭವಾದ ಬದುಕಿನ ಪಯಣವನ್ನು ಉದ್ಯಮಶೀಲತೆಯ ಮೂಲಕ ಯಶಸ್ಸಿನತ್ತ ಕೊಂಡೊಯ್ದು, ಅದರ ಫಲವನ್ನು ಸಮಾಜದೊಂದಿಗೆ ಹಂಚಿಕೊಂಡ ಶಾಫಿ ಹಾಜಿ ಖಂಡಿಗೆ ಅವರ ಜೀವನಗಾಥೆ ಗ್ರಾಮೀಣ ಯುವಜನತೆಗೆ ಪ್ರೇರಣಾದಾಯಕವಾಗಿದೆ.

ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ರಸ್ತೆ ಮತ್ತು ಸಾರಿಗೆ ಸಂಪರ್ಕವೂ ಪ್ರಮುಖ ಮೂಲಸೌಕರ್ಯ ಎಂಬುದನ್ನು ತಮ್ಮ ಕಾರ್ಯದ ಮೂಲಕ ಸಾಬೀತುಪಡಿಸಿದ ಸಾರಿಗೆ ಉದ್ಯಮಿ ಶಾಫಿ ಹಾಜಿ ಖಂಡಿಗೆ ಅವರಿಗೆ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸಲ್ಲಿಸಲಾದ ಸನ್ಮಾನವು ಅವರ ದಶಕಗಳ ಸೇವೆಗೆ ಸಲ್ಲಿಸಿದ ಗೌರವದ ಪ್ರತೀಕವಾಗಿದೆ.

ಅವರ ಪರಿಶ್ರಮದ ಬದುಕು, ಉದ್ಯಮಶೀಲತೆ ಹಾಗೂ ಸಮಾಜಮುಖಿ ಸೇವೆ ಮುಂದಿನ ಪೀಳಿಗೆಗೆ ದಾರಿದೀಪವಾಗಲಿ ಎಂಬುದು ನಮ್ಮೆಲ್ಲರ  ಆಶಯವಾಗಿದೆ.

ಬರಹ : ಜಯ ಮಣಿಯಂಪಾರೆ


Post a Comment

0 Comments

ಜಾಹೀರಾತು

Responsive Advertisement