Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಸರಗೋಡು ಆರ್‌ಟಿಒ ಕಚೇರಿಯಲ್ಲಿ ಪರದಾಡಿ ಬಸವಳಿಯುವ ಬಡಪಾಯಿಗಳು

ಕಾಸರಗೋಡು : ಸಾಮಾನ್ಯ ಜನರ ಸಾರಿಗೆ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾದ ಕಾಸರಗೋಡು ಆರ್‌ಟಿಒ ಕಚೇರಿಯೇ ಇದೀಗ ಜನರಿಗೆ ಸಮಸ್ಯೆಯ ಕೇಂದ್ರವಾಗಿ ಪರಿಣಮಿಸಿದೆ ಎಂಬ ಆರೋಪ ಕೇಳಿಬರುತ್ತಿದೆ. ವಿವಿಧ ಅಗತ್ಯಗಳಿಗಾಗಿ ಪ್ರತಿನಿತ್ಯ ಕಚೇರಿಗೆ ಆಗಮಿಸುವ ಜನರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಪರದಾಡಿ ಬಸವಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಚೇರಿಗೆ ಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸಮರ್ಪಕವಾದ ಕುರ್ಚಿಗಳ ವ್ಯವಸ್ಥೆಯಿಲ್ಲ. ದೂರದ ಊರುಗಳಿಂದ, ಅದರಲ್ಲೂ ವಯೋವೃದ್ಧರು ತಮ್ಮ ಕೆಲಸಕ್ಕಾಗಿ ಕಚೇರಿಗೆ ಬಂದಾಗ ಗಂಟೆಗಟ್ಟಲೆ ನಿಂತುಕೊಂಡೇ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಸಾರ್ವಜನಿಕ ಸೇವೆಯ ಕಚೇರಿಯಲ್ಲಿ ಕನಿಷ್ಠ ಕುಳಿತುಕೊಳ್ಳುವ ವ್ಯವಸ್ಥೆಯೂ ಇಲ್ಲದಿರುವುದು ಆಡಳಿತದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಂತಾಗಿದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಇಷ್ಟೇ ಅಲ್ಲದೆ, ಯಾವ ಕೆಲಸಕ್ಕಾಗಿ ಎಲ್ಲಿಗೆ ತೆರಳಬೇಕು, ಯಾವ ದಾಖಲೆಗಳನ್ನು ಸಲ್ಲಿಸಬೇಕು, ಯಾವ ಅಧಿಕಾರಿಯನ್ನು ಸಂಪರ್ಕಿಸಬೇಕು ಎಂಬುದನ್ನು ತಿಳಿಸುವ ಸಮರ್ಪಕ ಸೂಚನಾ ಫಲಕಗಳ ಕೊರತೆಯೂ ಜನರ ಗೊಂದಲಕ್ಕೆ ಕಾರಣವಾಗಿದೆ. ಮೊದಲ ಬಾರಿಗೆ ಕಚೇರಿಗೆ ಬರುವವರು ವಿಚಾರಣೆಗಾಗಿ ಒಬ್ಬರಿಂದ ಮತ್ತೊಬ್ಬರನ್ನು ಕೇಳುತ್ತಾ ಕಚೇರಿಯೊಳಗೆ ಅಲೆದಾಡಬೇಕಾದ ಸ್ಥಿತಿ ಇದೆ.

ವಿಚಾರಣೆಗಾಗಿ ಪ್ರತ್ಯೇಕ ಕೌಂಟರ್ ಅಥವಾ ವ್ಯವಸ್ಥೆ ಇಲ್ಲದಿರುವುದರಿಂದ ಸಣ್ಣಪುಟ್ಟ ಮಾಹಿತಿಗಾಗಿ ಕೂಡ ಜನರು ಸರತಿ ಸಾಲಿನಲ್ಲಿ ನಿಂತು ಕಾಯಬೇಕಾಗಿದೆ. ಒಂದು ಕೆಲಸಕ್ಕಾಗಿ ಬಂದವರು ಯಾವ ವಿಭಾಗಕ್ಕೆ ಹೋಗಬೇಕು ಎಂಬ ಸ್ಪಷ್ಟತೆ ಇಲ್ಲದೆ ಸಮಯ ಕಳೆಯುವಂತಾಗಿದೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾದ ಕಚೇರಿಯಲ್ಲೇ ಗಂಟೆಗಟ್ಟಲೆ ನಿಲ್ಲುವ ಅನಿವಾರ್ಯತೆ ಉಂಟಾಗಿರುವುದು ಪ್ರಶ್ನಾರ್ಹವಾಗಿದೆ.

ಆರ್‌ಟಿಒ ಕಚೇರಿಗೆ ಬರುವ ಪ್ರತಿಯೊಬ್ಬರೂ ಯಾವುದೋ ಒಂದು ಅಗತ್ಯಕ್ಕಾಗಿ ಬರುತ್ತಾರೆ. ಅವರ ಸಮಯವೂ ಅಮೂಲ್ಯ. ಸರ್ಕಾರದ ಕಚೇರಿಗಳು ಜನಸ್ನೇಹಿಯಾಗಬೇಕು ಎಂಬ ಆಶಯವಿದ್ದರೂ, ಕಾಸರಗೋಡು ಆರ್‌ಟಿಒ ಕಚೇರಿಯ ಪರಿಸ್ಥಿತಿ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿರುವಂತೆ ಕಾಣುತ್ತಿದೆ.

ಕಚೇರಿ ದೊಡ್ಡದಾಗುವುದಕ್ಕಿಂತ ಜನರಿಗೆ ಅನುಕೂಲವಾಗುವ ವ್ಯವಸ್ಥೆ ದೊಡ್ಡದಾಗಬೇಕು. ಕುರ್ಚಿಗಳು, ಸ್ಪಷ್ಟ ಸೂಚನಾ ಫಲಕಗಳು, ಪ್ರತ್ಯೇಕ ವಿಚಾರಣಾ ಕೌಂಟರ್, ವಯೋವೃದ್ಧರು ಮತ್ತು ವಿಶೇಷ ಅಗತ್ಯವುಳ್ಳವರಿಗೆ ಆದ್ಯತಾ ವ್ಯವಸ್ಥೆ ಸೇರಿದಂತೆ ಕನಿಷ್ಠ ಸಾರ್ವಜನಿಕ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.

Post a Comment

0 Comments

ಜಾಹೀರಾತು

Responsive Advertisement