ಬದಿಯಡ್ಕ : ಕಾನ-ಗೋಳಿಯಡ್ಕ ಸೇತುವೆ ನಿರ್ಮಾಣವಾಗಬಹುದೇ ಎಂಬ ನಿರೀಕ್ಷೆಯಲ್ಲಿ ಸ್ಥಳೀಯರು ಕಾಯುತ್ತಿದ್ದಾರೆ. ಕನ್ಯಪ್ಪಾಡಿಯಿಂದ ಕಾನ ಮೂಲಕ ಗೋಳಿಯಡ್ಕ, ಶಾಂತಿಪಳ್ಳ ಹಾಗೂ ಪೆರಡಾಲ ಸೇರಿದಂತೆ ಹಲವು ಪ್ರದೇಶಗಳಿಗೆ ಸುಲಭವಾಗಿ ತಲುಪಲು ಈ ಸೇತುವೆ ಪ್ರಮುಖ ಸಂಪರ್ಕ ಮಾರ್ಗವಾಗಿದೆ.
ಎರಡೂ ಬದಿಗಳಲ್ಲಿ ಕಡಿದಾದ ಇಳಿಜಾರು ಹೊಂದಿರುವ ಈ ಪ್ರದೇಶದಲ್ಲಿ ಪ್ರಸ್ತುತ ಕಾಲುದಾರಿ ಸೇತುವೆ ಇದ್ದರೂ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಸೇತುವೆಯ ಸ್ಥಿತಿಯೂ ಶಿಥಿಲಗೊಂಡಿದ್ದು, ಯಾವ ಕ್ಷಣದಲ್ಲಾದರೂ ಕುಸಿಯುವ ಭೀತಿಯಿದೆ. ಸ್ಥಳೀಯರು ಹಲವು ಬಾರಿ ಪಂಚಾಯತ್ ಆಡಳಿತ ಸಮಿತಿಗಳಿಗೆ ದೂರು ನೀಡಿದ್ದರು. ಬಳಿಕ ಪಂಚಾಯತ್‌ನ ಯುಡಿಎಫ್ ಸದಸ್ಯರು ಹಾಗೂ ಸ್ಥಳೀಯರ ಪ್ರಯತ್ನದ ಫಲವಾಗಿ ಮಾಜಿ ಶಾಸಕ ಎನ್.ಎ. ನೆಲ್ಲಿಕುನ್ನು ಅವರ ಆಸ್ತಿ ಅಭಿವೃದ್ಧಿ ನಿಧಿಯಿಂದ ಸೇತುವೆ ನಿರ್ಮಾಣಕ್ಕಾಗಿ 50 ಲಕ್ಷ ರೂ. ಮಂಜೂರು ಮಾಡಲಾಗಿತ್ತು. ಆದರೆ ಸೇತುವೆ ಹಾಗೂ ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಈ ಮೊತ್ತ ಸಾಕಾಗುವುದಿಲ್ಲ ಎಂಬ ಅಧಿಕಾರಿಗಳ ವರದಿ ಹಾಗೂ ಎಂಜಿನಿಯರ್ ಸಿದ್ಧಪಡಿಸಿದ ಅಂದಾಜಿನ ಆಧಾರದ ಮೇಲೆ ಮತ್ತೆ 50 ಲಕ್ಷ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ. ಸಂಬಂಧಿತ ಸಾರ್ವಜನಿಕ ಕಾಮಗಾರಿಗಳ ಸಹಾಯಕ ಎಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯ ಅಂದಾಜು ಸಿದ್ಧಪಡಿಸಿದ್ದಾರೆ. ಇದರಿಂದ ಹಲವು ವರ್ಷಗಳಿಂದ ಕಾದಿರುವ ಸೇತುವೆ ನಿರ್ಮಾಣದ ಕನಸು ನನಸಾಗುವ ನಿರೀಕ್ಷೆಯಲ್ಲಿ ಸ್ಥಳೀಯರು ಇದ್ದಾರೆ.

0 Comments