ಕಾಸರಗೋಡು : ಜಿಲ್ಲೆಯಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಸ್ಥಾಪಿಸಲು ಪೆರಿಯದಲ್ಲಿರುವ ಪ್ಲಾಂಟೇಶನ್ ಕಾರ್ಪೊರೇಷನ್ ಆಫ್ ಕೇರಳ (PCK)ನ 274.69 ಎಕರೆ ಭೂಮಿ ಅತ್ಯಂತ ಸೂಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ರಾಜ್ಯ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿದ್ದಾರೆ.
ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ ವರದಿ ಸಲ್ಲಿಸಲಾಗಿದ್ದು, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಅವರ ಮನವಿಯ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಸ್ಥಳ ಪರಿಶೀಲನೆ ನಡೆಸಿ, ಹತ್ತು ದಿನಗಳೊಳಗೆ ವಿವರವಾದ ವರದಿ ಸಿದ್ಧಪಡಿಸಲಾಗಿದೆ. ರೀ-ಸರ್ವೆ ಡಿಜಿಟಲ್ ಸ್ಕೆಚ್, ಡ್ರೋನ್ ದೃಶ್ಯಗಳು ಹಾಗೂ ಸ್ಥಳದ ಚಿತ್ರಗಳನ್ನು ವರದಿಯೊಂದಿಗೆ ಸೇರಿಸಲಾಗಿದೆ.
ಏಮ್ಸ್ ಮಾದರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಸ್ಥಾಪನೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳನ್ನು ಪೆರಿಯ ಭೂಮಿ ಪೂರೈಸುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಕನಿಷ್ಠ 200 ಎಕರೆ ಭೂಮಿ, ಉತ್ತಮ ರಸ್ತೆ ಸಂಪರ್ಕ, ಅಗತ್ಯ ಪ್ರಮಾಣದ ನೀರು ಮತ್ತು ವಿದ್ಯುತ್ ಸೌಲಭ್ಯ ಹಾಗೂ ಮೂಲಸೌಕರ್ಯಗಳು ಪ್ರಮುಖ ಮಾನದಂಡಗಳಾಗಿವೆ.
ಪೆರಿಯದಲ್ಲಿರುವ ಭೂಮಿಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸ್ಥಳಾವಕಾಶ, ಉತ್ತಮ ಸಾರಿಗೆ ಸಂಪರ್ಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಏಮ್ಸ್ ಸ್ಥಾಪನೆಗೆ ಪೆರಿಯ ಅತ್ಯಂತ ಸೂಕ್ತ ಸ್ಥಳವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ. ರಾಜ್, ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಹೊಸದುರ್ಗ ತಹಶೀಲ್ದಾರ್ ಕೆ. ರಮೇಶ್, ಪೆರಿಯ ವಿಲೇಜ್ ಅಧಿಕಾರಿ ಮಧು, ತಾಲೂಕು ಡೆಪ್ಯುಟಿ ತಹಶೀಲ್ದಾರ್ ಅನಿಲ್ ಫಿಲಿಪ್ ಹಾಗೂ ಪಿಸಿಕೆ ಯುನಿಟ್ ಮ್ಯಾನೇಜರ್ ಸಜೀವ್ ಸ್ಥಳ ಪರಿಶೀಲನೆಯಲ್ಲಿ ಭಾಗವಹಿಸಿದ್ದರು.
ಏಮ್ಸ್ ಸ್ಥಾಪನೆಯಾದರೆ ಜಿಲ್ಲೆಯ ಎಂಡೋಸಲ್ಫಾನ್ ಪೀಡಿತರಿಗೆ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ, ಪುನರ್ವಸತಿ, ನ್ಯೂರಾಲಜಿ, ಪರಿಸರ ವೈದ್ಯಕೀಯ ಹಾಗೂ ದೀರ್ಘಕಾಲೀನ ಚಿಕಿತ್ಸಾ ಸೇವೆಗಳನ್ನು ಒದಗಿಸುವ ಪ್ರಮುಖ ಕೇಂದ್ರವಾಗಲಿದೆ.
ಪೆರಿಯ ಸಮೀಪದಲ್ಲಿರುವ ಕೇರಳ ಕೇಂದ್ರ ವಿಶ್ವವಿದ್ಯಾಲಯ, ಐಸಿಎಆರ್–ಸಿಪಿಸಿಆರ್‌ಐ ಹಾಗೂ ಎಚ್‌ಎಎಲ್ ಸಂಸ್ಥೆಗಳೊಂದಿಗೆ ಸಹಯೋಗದ ಮೂಲಕ ವೈದ್ಯಕೀಯ ಶಿಕ್ಷಣ, ಸಾರ್ವಜನಿಕ ಆರೋಗ್ಯ ಮತ್ತು ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಗೆ ಉತ್ತಮ ಅವಕಾಶ ಸಿಗಲಿದೆ. ವಿಶ್ವವಿದ್ಯಾಲಯದ ಹೆಲಿಪ್ಯಾಡ್ ತುರ್ತು ಏರ್ ಆಂಬ್ಯುಲೆನ್ಸ್ ಸೇವೆಗೂ ಸಹಕಾರಿಯಾಗಲಿದೆ.
ಕೇಂದ್ರ ವಿಶ್ವವಿದ್ಯಾಲಯಕ್ಕಾಗಿ ಹಿಂದೆ ಪ್ಲಾಂಟೇಶನ್ ಕಾರ್ಪೊರೇಷನ್‌ನ ಭೂಮಿ ಹಸ್ತಾಂತರಿಸಿದ ಮಾದರಿಯಲ್ಲಿ, ನಿಯಮಾನುಸಾರ ಕಂದಾಯ ಇಲಾಖೆಯ ಮೂಲಕ ಏಮ್ಸ್‌ಗಾಗಿ ಭೂಮಿ ಒದಗಿಸಲು ಸಾಧ್ಯವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಇಲ್ಲಿ ಕೆಲಸ ಮಾಡುತ್ತಿರುವ 28 ದಿನಗೂಲಿ ಕಾರ್ಮಿಕರಿಗೆ ಏಮ್ಸ್‌ನಲ್ಲಿ ಭದ್ರತೆ, ಸ್ವಚ್ಛತೆ ಹಾಗೂ ನಿರ್ವಹಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಪುನರ್ವಸತಿ ಕಲ್ಪಿಸುವಂತೆ ಶಿಫಾರಸು ಮಾಡಲಾಗಿದೆ. ಇದರ ಜೊತೆಗೆ ಸ್ಥಳೀಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಏಮ್ಸ್ ಸ್ಥಾಪನೆಯಾದರೆ ಉತ್ತರ ಕೇರಳ ಮಾತ್ರವಲ್ಲದೆ ಕರ್ನಾಟಕದ ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿ ಪ್ರದೇಶಗಳ ಜನರಿಗೂ ಸುಲಭವಾಗಿ ತಲುಪಬಹುದಾದ ಪ್ರಮುಖ ತೃತೀಯ ಹಂತದ ಆರೋಗ್ಯ ಕೇಂದ್ರವಾಗಿ ಪೆರಿಯ ಬೆಳೆಯಲಿದೆ.

0 Comments