ನಾಡಿನೆಲ್ಲೆಡೆ ಇಂದು ವಿಷು ಸಂಭ್ರಮ. ಪಗ್ಗು ತಿಂಗಳು (ಎಪ್ರಿಲ್ ಮಧ್ಯದಿಂದ ಮೇ ಮಧ್ಯದವರೆಗೆ) ತುಳುವರಿಗೆ ವರ್ಷ ಪ್ರಾರಂಭದ ಮೊದಲ ತಿಂಗಳು. ಅಂದರೆ ಮೀನ ಮಾಸ ಮುಗಿದು ಮೇಷ ಮಾಸದ ಸಂಕ್ರಮಣಕ್ಕೆ ಹೊಸ ವರ್ಷ ಆಚರಣೆ. ಮೇಷ ಸಂಕ್ರಮಣದ ಮರುದಿನ ಅಂದರೆ 'ಸಿಂಗೊಡೆ'ಯನ್ನು ತುಳುವರು ವರ್ಷದ ಮೊದಲ ದಿನ 'ಬಿಸು ಪರ್ಬ' ಎಂದು ಆಚರಿಸುತ್ತಾರೆ. 'ಬಿಸು ಪರ್ಬ' ಎಂದರೆ ಸೌರಮಾನ ಯುಗಾದಿ ಎಂದರ್ಥ. ಈ ದಿನವೇ ತುಳುವರಿಗೆ ವರ್ಷಾರಂಭದ ದಿನ.
ತುಳುವರು ಮೂಲತಃ ಕೃಷಿಕರು. ಆದ್ದರಿಂದ ಅವರ ಎಲ್ಲಾ ಹಬ್ಬಗಳು ಒಂದಿಲ್ಲೊಂದು ರೀತಿ ಕೃಷಿ ಸಂಸ್ಕೃತಿ ಹಾಸುಹೊಕ್ಕಿದೆ. ಬಿಸು ಪರ್ಬದಲ್ಲೂ ಕಣಿ ಇಡುವುದು, ಬುಳೆ ಕಾಣಿಕೆ ಒಪ್ಪಿಸುವುದು, ಎಣೇಲು ಬೇಸಾಯಕ್ಕೆ ಮುಹೂರ್ತ 'ಕೈ ಬಿತ್ ಹಾಕುವುದು' ಮುಂತಾದ ಆಚರಣೆ ಇದೆ. ಇವೆಲ್ಲದರಲ್ಲಿ ನಾವು ಕೃಷಿ ಪ್ರಾಧಾನ್ಯತೆಯನ್ನು ಕಾಣಬಹುದು.
ಬಿಸು ಹಬ್ಬದಂದು ಬೆಳಗ್ಗೆ ಬೇಗನೇ ಎದ್ದು ಇಲ್ಲವೇ ಅದರ ಮುನ್ನಾ ದಿನವೇ ಮನೆಯ ಯಜಮಾನ ಅನುಕೂಲಕ್ಕೆ ತಕ್ಕಂತೆ ದೈವಸ್ಥಾನ, ತುಳಸಿಕಟ್ಟೆಯ ಎದುರು ಎರಡು ಜೋಡಿ ಬಾಳೆ ಎಲೆಯಲ್ಲಿ ಒಂದು ಮಣೆ ಇಡುತ್ತಾರೆ. ಅದರ ಮೇಲೆ ದೀಪವಿಟ್ಟು ಅದರ ಎಡ ಬಲಗಳಲ್ಲಿ ಹೂವು, ಅಕ್ಕಿ, ಹಣ್ಣು, ತರಕಾರಿ, ತೆಂಗಿನಕಾಯಿ ಇಟ್ಟು ಅದರ ಮಧ್ಯಭಾಗದಲ್ಲಿ ಕನ್ನಡಿ ಇಡುತ್ತಾನೆ. ಬಿಸುಹಬ್ಬದಂದು ಬೆಳಗ್ಗೆ ಬೇಗ ಎದ್ದು ಮನೆಮಂದಿಯೆಲ್ಲ ಮಿಂದು ಶುಚಿಯಾಗಿ ಕನ್ನಡಿಯಲ್ಲಿ ಮುಖ ನೋಡಿ ಬಿಸುಕಣಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ.
ಪಗ್ಗು ತಿಂಗಳೆಂದರೆ ಗಿಡ-ಮರಗಳಲ್ಲಿ ಫಲಗಳು ಯಥೇಚ್ಛವಾಗಿ ಬೆಳೆದಿರುತ್ತವೆ. ಅಲ್ಲದೆ ಬಿಸು ಕಣಿಗೆ ಅರ್ಪಿಸದೆ ಹೊಸಫಲವನ್ನು ತಿನ್ನಬಾರದೆಂಬ ನಂಬಿಕೆ ತುಳುವರಲ್ಲಿ ರೂಢಿಯಲ್ಲಿದೆ. ಬಿಸುಕಣಿಗೆ ಇಟ್ಟಿರುವ ತರಕಾರಿಗಳನ್ನೇ ಇಂದಿನ ಮಧ್ಯಾಹ್ನದ ಭೋಜನಕ್ಕೆ ಬಳಸಲಾಗುತ್ತದೆ. ಗೇರುಬೀಜ ಹಾಕಿರುವ ಪಾಯಸವೂ ಅಂದಿನ ವಿಶೇಷತೆಯಲ್ಲಿ ಒಂದಾಗಿದೆ.
ತುಳುನಾಡಿನಲ್ಲಿ ‘ಬಿಸು’ವಾಗಿಯೂ ಕೇರಳದಲ್ಲಿ ‘ವಿಷು’ವಾಗಿಯೂ ಅಚರಿಸಲ್ಪಡುವ ಸೌರಯುಗಾದಿ ಹಬ್ಬವೂ ಸುಗ್ಗಿ ಮತ್ತು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಸೌರಮಾನ ಪಂಚಾಂಗದ ಪ್ರಕಾರ ಸೌರಯುಗಾದಿಯನ್ನು ಚೈತ್ರ ಶುಕ್ಲ ಷಷ್ಠಿ ತಿಥಿಯಂದು ಆಚರಣೆ ಮಾಡಲಾಗುತ್ತದೆ. ಜೊತೆಗೆ ಈ ದಿನ ಮೀನ ಮಾಸವು ಮುಗಿದು ಮೇಷ ಮಾಸ ಆರಂಭವಾಗುತ್ತದೆ. ಇದರ ಬಳಿಕ ಕೃಷಿಕರು ವಿವಿಧ ರೀತಿಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ.
ಈ ಬಾರಿಯ ಹಬ್ಬವನ್ನು ಎ. 14 ರಂದು (ಇಂದು) ಆಚರಿಸಲಾಗುತ್ತದೆ.
ನಮ್ಮ ಓದುಗರರಿಗೂ, ಚಾನೆಲ್ ವೀಕ್ಷಕರಿಗೂ, ಹಿತೈಷಿಗಳಿಗೂ, ಕುಟುಂಬ ವರ್ಗಕ್ಕೂ,ಜಾಹೀರಾತುದಾರರಿಗೂ ವಿಷು ಹಬ್ಬದ ಶುಭಾಶಯಗಳು.
0 Comments