Ticker

6/recent/ticker-posts

Ad Code

ನ.25 ವಿಶ್ವ ಮಹಿಳಾ ಶೋಷಣೆ ನಿವಾರಣಾ ದಿನ


 ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು' ಎಂಬುದಾಗಿ ಶತಮಾನಗಳ ಹಿಂದೆಯೇ   ಹೆಣ್ಣಿನ ಮೇಲೆ ಕಾಳಜಿ ತೋರಿದ್ದಾರೆ ಸಂಚಿ ಹೊನ್ನಮ್ಮ! ಅಂದರೆ ಮಹಿಳೆಯರ ಮೇಲೆ  ದೌರ್ಜನ್ಯ  ಇಂದು ನಿನ್ನೆಯ ವಿಚಾರವಲ್ಲ ಎಂಬುದು ಸ್ಪಷ್ಟ!

          ಜಗತ್ತಿನಾದ್ಯಂತ ಸ್ತ್ರೀಯರ, ಹೆಣ್ಣು ಮಕ್ಕಳ ಮೇಲಾಗುವ ಮಾನಸಿಕ, ದೈಹಿಕ ಪೀಡನೆಗಳು ಅಷ್ಟಿಷ್ಟಲ್ಲ!  ಹೊರಗಿನವರಿಗಿಂತಲೂ ಹೆಚ್ಚಾಗಿ ಮನೆಯಲ್ಲಿ , ಉದ್ಯೋಗ ಸ್ಥಳದಲ್ಲಿ  ಶೋಷಣೆಯನ್ನನುಭವಿಸುತ್ತಾರೆ. ಕೆಲವೊಮ್ಮೆ ತಾನು ತುಂಬಾ ನಂಬಿದ ಸ್ನೇಹಿತರಿಂದಲೇ ಆಕೆ ಹಿಂಸೆಗೊಳಪಡುತ್ತಾಳೆ. ಹೇಳಲಾಗದೆ ಸುಮ್ಮನಿರಲೂ ಆಗದೇ ತೊಳಲಾಡುತ್ತಾಳೆ. ಹೆಣ್ಣಿನ ಅಸಹಾಯಕತೆಯನ್ನು ತಮ್ಮ ತೆವಲಿಗೋಸ್ಕರ ಬಳಸಿಕೊಳ್ಳುವ ಮಾನ್ಯರನ್ನು ಏನೆನ್ನಬೇಕೋ...!

            ಪ್ರಪಂಚದಾದ್ಯಂತ ಮಹಿಳೆಯರ ಹಾಗೂ ಹದಿಹರೆಯದ ಹೆಣ್ಣುಮಕ್ಕಳ ಮೇಲಾಗುತ್ತಿರುವ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ,  ಜಾಗೃತಿ ಮೂಡಿಸುವ ಸಲುವಾಗಿಯೇ ಪ್ರತಿವರ್ಷ ನವೆಂಬರ್ 25ರನ್ನು ಅಂತರಾಷ್ಟ್ರೀಯ ಮಹಿಳಾ ಶೋಷಣೆ ನಿವಾರಣಾ ದಿನವಾಗಿ ಆಚರಿಸಲಾಗುತ್ತದೆ.  

          ಪ್ರಪಂಚ ಎಷ್ಟೇ ಮುಂದುವರಿದರೂ  ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ಮಾತ್ರ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ನಿಲ್ಲಿಸಲು ಮತ್ತು ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ನವೆಂಬರ್ 25 ರಂದು ವಿಶ್ವ ಮಹಿಳಾ ಶೋಷಣೆ ನಿವಾರಣಾ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಮಹಿಳಾ ಶೋಷಣೆ ನಿವಾರಣಾ ದಿನದ ಇತಿಹಾಸ

1981 ರಲ್ಲಿ ಲ್ಯಾಟಿನ್ ಅಮೇರಿಕಾ ಮತ್ತು ಕೆರೆಬಿಯನ್ ಸ್ತ್ರೀವಾದಿ ಕಾರ್ಯಕರ್ತರು ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಬೇಕು, ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸಬೇಕು ಎಂಬ ನಿಟ್ಟಿನಲ್ಲಿ ನವೆಂಬರ್ 25 ರಂದು ಮಹಿಳಾ ಶೋಷಣೆ ನಿವಾರಣಾ ದಿನವನ್ನು ಆಚರಿಸಬೇಕೆಂದು ತೀರ್ಮಾನಿಸಿದರು. ಮಹಿಳಾ ಶೋಷಣೆ ನಿವಾರಣಾ ದಿನಾಚರಣೆಯನ್ನು, ಈ ನಿರ್ಧಿಷ್ಟ ದಿನದಂದು ಆಚರಿಸಲು ಕಾರಣವೇನೆಂದರೆ, 1960 ನವೆಂಬರ್ 25 ರಲ್ಲಿ ಮೂವರು ಸಹೋದರಿಯರಾದ ಪ್ಯಾಟ್ರಿಯಾ ಮರ್ಸಿಡಿಸ್ ಮೆರಾಬೆಲ್, ಮರಿಯಾ ಅರ್ಜೆಂಟೀನಾ ಮಿನಾರ್ವಾ ಮೆರಾಬೆಲ್ ಮತ್ತು ಆಂಟೋನಿಯಾ ಮಾರಿಯಾ ತೆರೇಸಾ ಮೆರಾಬೆಲ್ ಅವರನ್ನು ಡೊಮಿನಿಕನ್ ರಿಪಬ್ಲಿಕ್ ಆಡಳಿತಗಾರ ರಾಫೆಲ್ ಟ್ರುಜೆಲ್ಲೊನ ಆದೇಶದ ಮೇರೆಗೆ ಕ್ರೂರವಾಗಿ ಕೊಲ್ಲಲಾಯಿತು. ಆ ಮೂವರು ಸಹೋದರಿಯರು ಈತನ ಸರ್ವಾಧಿಕಾರವನ್ನು ವಿರೋಧಿಸಿದ್ದರೆಂಬ ಕಾರಣಕ್ಕೆ ಅವರನ್ನು ಕೊಲ್ಲಲಾಯಿತು.  ಈ ಮೂವರು ದಿಟ್ಟ ಮಹಿಳೆಯರನ್ನು ಸ್ಮರಿಸುವ ಸಲುವಾಗಿ ನವೆಂಬರ್ 25ರಂದು ಈ ವಿಶೇಷ ದಿನವನ್ನು ಆಚರಿಸುವುದೆಂದು ನಿರ್ಧರಿಸಲಾಯಿತು.

ನಂತರ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಮಾಣ ತೀವ್ರವಾಗಿ ಹೆಚ್ಚಾದ ಕಾರಣ 1999 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಪ್ರತಿ ವರ್ಷ ನವೆಂಬರ್ 25 ರಂದು ವಿಶ್ವ ಮಹಿಳಾ ಶೋಷಣೆ ನಿವಾರಣಾ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.

      ಇಂದಿಗೂ ಬಹುದೊಡ್ಡ ಜಾಗತಿಕ ಸಮಸ್ಯೆಯೇ ಆಗಿರುವ ಸ್ತ್ರೀ ಶೋಷಣೆಯನ್ನು ತಡೆಗಟ್ಟಲು, ಮುಖ್ಯವಾಗಿ ಮಹಿಳೆಯರಿಗೆ ಈ ಸಮಾಜದಲ್ಲಿ ಮುಕ್ತವಾಗಿ ಬದುಕಲು ಅವಕಾಶ ನೀಡಬೇಕು ಎನ್ನುವ ನಿಟಿನಲ್ಲಿ ವಿಶ್ವ ಮಹಿಳಾ ದೌರ್ಜನ್ಯ ವಿರೋಧಿ ದಿನದಂದು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅಲ್ಲದೆ ಈ ದಿನ ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಮತ್ತು ಅದರ ನಿರ್ಮೂಲನೆಗೆ ಕರೆ ನೀಡಲು ಪ್ರಪಂಚದಾದ್ಯಂತ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಹಲವು ಅಭಿಯಾನ ಕಾರ್ಯಕ್ರಮಗಳನ್ನು ನಡೆಸುತ್ತವೆ.

        ಸಮಾಜ ಎಷ್ಟೇ ಮುಂದುವರಿದರೂ ಮಾನವನ   ಸ್ವಭಾವ ಮಾತ್ರ ಬದಲಾಗಿಲ್ಲ. ದಿನಗಳೆದಂತೆ ಆತ ಮಾನಸಿಕ ಅಧಃಪತನಗೊಳ್ಳುತ್ತಾ ಸಾಗುತ್ತಿದ್ದಾನೆ. ಆಧುನಿಕರೆಂದುಕೊಳ್ಳುತ್ತಾ ಸಂಸ್ಕಾರ-ಸಂಸ್ಕೃತಿಗಳನ್ನು ಮೂಲೆಗುಂಪಾಗಿಸಿ ಅವನತಿಯ ಹಾದಿ ಹಿಡಿದಿದ್ದಾನೆ. ಗೋಮುಖವನ್ನು ಧರಿಸಿ ವ್ಯಾಘ್ರತನ ಮೆರೆಯುತ್ತಿದ್ದಾನೆ. ತನ್ನನ್ನು ನಂಬಿದ ಹಿತೈಷಿಗಳನ್ನೂ ಬಿಡುವುದಿಲ್ಲ ಎಂಬುದೇ ವಿಪರ್ಯಾಸ.

ಲೇಖನ ಸಂಗ್ರಹ : ವನಜಾಕ್ಷಿ ಪಿ ಚೆಂಬ್ರಕಾನ

Post a Comment

0 Comments