ಟ್ರಕ್ಕೊಂದು ಸಾವಿರ ಅಡಿ ಪ್ರಪಾತಕ್ಕೆ ಉರುಳಿ 18 ಕಾರ್ಮಿಕರು ಸಾವನ್ನಪ್ಪಿದ ಘಟನೆ ಅರುಣಾಚಲ ಪ್ರದೇಶದ ಅಂಜಾವ್‌ನಲ್ಲಿ ನಡೆದಿದೆ. ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯವರಾದ 18 ಕಾರ್ಮಿಕರು ಸಾವನ್ನಪ್ಪಿದ್ದು, ಅರುಣಾಚಲ ಪ್ರದೇಶದ ಹಯುಲಿಯಾಂಗ್-ಚಾಗ್ಲಗಂ ರಸ್ತೆಯ ಬಳಿ ನಿರ್ಮಾಣ ಹಂತದ ಸೈಟ್ ಕೆಲಸಕ್ಕೆ ಟ್ರಕ್‌ನಲ್ಲಿ ಕರೆದೊಯ್ಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಡಿ.8ರಂದು ರಾತ್ರಿ ಅಪಘಾತ ಸಂಭವಿಸಿದ್ದು, ಎರಡು ದಿನಗಳ ಕಾಲ ಯಾರಿಗೂ ಮಾಹಿತಿ ಲಭ್ಯವಾಗಿರಲಿಲ್ಲ. ಡಿ.10ರಂದು ರಾತ್ರಿ ಅಪಘಾತದಲ್ಲಿ ಬದುಕುಳಿದ ಓರ್ವ ವ್ಯಕ್ತಿ ಜಿಆರ್‌ಇಎಫ್ ಶಿಬಿರ ತಲುಪಿದಾಗ ಅರುಣಾಚಲ ಪ್ರದೇಶ ಪೊಲೀಸರು ಮತ್ತು ಪಿಆರ್‌ಒ ರಕ್ಷಣಾ ಇಲಾಖೆಗೆ ಮಾಹಿತಿ ಲಭ್ಯವಾಗಿದೆ. ಆನಂತರ ಗುರುವಾರ ಸ್ಪಿಯರ್ ಕಾರ್ಪ್ಸ್, ಭಾರತೀಯ ಸೇನೆ, ಸ್ಥಳೀಯ ಪೊಲೀಸರು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಜಿಲ್ಲಾ ಅಧಿಕಾರಿಗಳು ಶೋಧ ಕಾರ್ಯಚರಣೆಯಲ್ಲಿ ತೊಡಗಿಕೊಂಡಿದ್ದರು. ನಾಲ್ಕು ಗಂಟೆಗಳ ತೀವ್ರ ಶೋಧ ಕಾರ್ಯಾಚರಣೆ ಬಳಿಕ ರಸ್ತೆಯಿಂದ ಸುಮಾರು 200 ಮೀ. ಕೆಳಗೆ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಟ್ರಕ್‌ನ ಅವಶೇಷಗಳು ಕಂಡುಬಂದಿದೆ. ಈವರೆಗೂ 18 ಶವಗಳನ್ನು ಪತ್ತೆಹಚ್ಚಲಾಗಿದೆ.

0 Comments