ಸಾಂಕೇತಿಕ ಚಿತ್ರ
ಯಾವುದೇ ವ್ಯಕ್ತಿ ನಿಯಮಬಾಹಿರವಾಗಿ ಸೌಲಭ್ಯ, ವಸ್ತು ಅಥವಾ ಹಣ ಪಡೆಯುವುದು ಅಥವಾ ಲಾಭ ಮಾಡಿಕೊಳ್ಳುವುದನ್ನು ಭ್ರಷ್ಟಾಚಾರ ಎನ್ನಬಹುದು. ಸಾರ್ವಜನಿಕ ಸೇವಾ ಸ್ಥಾನದಲ್ಲಿರುವವರು, ಜನ ಪ್ರತಿನಿಧಿಗಳು ಅಥವಾ ಸರಕಾರದ ಅಧಿಕಾರಿಗಳು/ಸೇವಕರು ನಿಯಮ ಬಾಹಿರವಾಗಿ ಅಥವಾ ತಮ್ಮ ಆ ಸ್ಥಾನವನ್ನು ಉಪಯೋಗಿಸಿಕೊಂಡು ತಮಗೆ ಸಲ್ಲಬೇಕಾದುದಕ್ಕಿಂತ ಹೆಚ್ಚಿನ ಸೌಲಭ್ಯ ಅಥವಾ ಲಾಭ ಪಡೆಯುವುದು. ತಮ್ಮ ಅಧಿಕಾರವನ್ನು ನಿಯಮಕ್ಕೆ ವಿರುದ್ಧವಾಗಿ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳುವುದು ಭ್ರಷ್ಟಾಚಾರ ಎನಿಸಿಕೊಳ್ಳುತ್ತದೆ.
ಜಗತ್ತು ಎದುರಿಸುತ್ತಿರುವ ಅತೀ ದೊಡ್ಡ ಸಮಸ್ಯೆಗಳಲ್ಲಿ ಭ್ರಷ್ಟಾಚಾರವೂ ಒಂದು. ಇದು ಒಂದು ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ದುರ್ಬಲಗೊಳಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಸಮಾಜದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ನಿಲ್ಲಿಸುವುದು ಮತ್ತು ಅದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ಡಿಸೆಂಬರ್ 09 ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.
ಈ ಭ್ರಷ್ಟಾಚಾರ ಒಂದು ಸಾಮಾಜಿಕ ಪಿಡುಗಾಗಿದ್ದು, ಇದರಿಂದ ದೇಶದ ಅಭಿವೃದ್ಧಿ ಕುಂಠಿತವಾಗುವುದು ಇದರ ಪರಿಣಾಮವೆಂದರೆ ಸಮಾಜದ ಒಂದು ವರ್ಗ ಮಾತ್ರ ಶ್ರೀಮಂತವಾಗುತ್ತದೆ, ಬಡವರು ಬಡವರಾಗಿಯೇ ಉಳಿಯಬೇಕಾಗುತ್ತದೆ. ಪ್ರಸ್ತುತ ಈ ಭ್ರಷ್ಟಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ ಕೃತ್ಯಗಳು ನಡೆಯುತ್ತಿವೆ. ಇದರಿಂದ ದೇಶಗಳ ಆರ್ಥಿಕತೆಗೆ ತೀವ್ರವಾದ ಪೆಟ್ಟು ಬೀಳುತ್ತಿದ್ದು, ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಾಗೂ ಭ್ರಷ್ಟಚಾರ ಕೃತ್ಯಗಳಲ್ಲಿ ತೊಡಗಿಕೊಳ್ಳದಿರುವಂತೆ ಜಾಗೃತಿ ಮೂಡಿಸಲು ಪ್ರತಿವರ್ಷ ಅಕ್ಟೋಬರ್ 09 ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.
ಭ್ರಷ್ಟಚಾರ ಯಾವುದೋ ಒಂದು ದೇಶದ ಸಮಸ್ಯೆಯಲ್ಲ, ಬದಲಾಗಿ ಇದು ಇಡೀ ಪ್ರಪಂಚದಲ್ಲಿರುವ ಬಹುತೇಕ ಎಲ್ಲಾ ದೇಶಗಳು ಎದುರಿಸುತ್ತಿರುವ ಒಂದು ಬಹುದೊಡ್ಡ ಸಮಸ್ಯೆಯಾಗಿದೆ. ಈ ಒಂದು ಸಮಸ್ಯೆಯಿಂದ ಇಂದಿಗೂ ಅದೆಷ್ಟೋ ದೇಶಗಳು ಜಗತ್ತಿನಲ್ಲಿ ಆರ್ಥಿಕವಾಗಿ ದುರ್ಬಲವಾಗಿದೆ. ಹಾಗಾಗಿ ಈ ಭ್ರಷ್ಟಾಚಾರವನ್ನು ತಡೆಗಟ್ಟಬೇಕು, ಜನರು, ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು ಎಂದು ಪ್ರತಿಯೊಬ್ಬರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದೊಂದಿಗೆ ಅಕ್ಟೋಬರ್ 31, 2003 ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಅಂತರಾಷ್ಟ್ರೀಯ ಭ್ರಷ್ಟಾಚಾರ ದಿನವನ್ನು ಆಚರಿಸಲು ಅಂಗೀಕಾರವನ್ನು ನೀಡಿತು. ಮತ್ತು ಡಿಸೆಂಬರ್ 09 ರಂದು ಈ ವಿಶೇಷ ಜಾಗೃತಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಪ್ರತಿ ವರ್ಷವೂ ಡಿಸೆಂಬರ್ 09 ರಂದು ಅಂತರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಭ್ರಷ್ಟಾಚಾರದ ಕಾರಣದಿಂದ ಅದೆಷ್ಟೋ ದೇಶಗಳ ಆರ್ಥಿಕತೆ ಹಿಂದುಳಿದಿದೆ. ಸಮಾಜದ ಕೆಲವು ಜನರು ಮಾತ್ರ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ಇದರಿಂದ ಶ್ರೀಮಂತರು ಶ್ರೀಮಂತರಾಗುತ್ತಲೇ ಇದ್ದಾರೆ, ಬಡವರು ಬಡವರಾಗಿಯೇ ಉಳಿದಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ಸಮಾಜದ ವಂಚಿತ ವರ್ಗದ ಕಲ್ಯಾಣಕ್ಕಾಗಿ ಭ್ರಷ್ಟಾಚಾರವನ್ನು ಕೊನೆಗೊಳಿಸುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರತಿಯೊಬ್ಬ ನಾಗರಿಕರಲ್ಲೂ ಜಾಗೃತಿ ಮೂಡಿಸಲು ಅಂತರಾಷ್ಟ್ರೀಯ ಭ್ರಷ್ಟಾಚಾರ ದಿನವನ್ನು ಆಚರಿಸಲಾಗುತ್ತದೆ.
ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಕಷ್ಟವಾಗಿರಬಹುದು ಆದರೆ ಅದು ಅಸಾಧ್ಯವಲ್ಲ. ಯಾರಾದರೂ ಲಂಚವನ್ನು ಸ್ವೀಕರಿಸುತ್ತಿದ್ದರೆ ಅಥವಾ ಲಂಚ ನೀಡುತ್ತಿರುವುದನ್ನು ಗಮನಿಸಿದರೆ ಅದನ್ನು ಕಾನೂನು ರೀತಿಯಲ್ಲಿ ಅಥವಾ ನಿಮ್ಮದೇ ರೀತಿಯಲ್ಲಿ ತಡೆಯಲು ಪ್ರಯತ್ನಿಸಬಹುದು. ರಾಜಕಾರಣಿಗಳು ಪ್ರತಿಯೊಂದು ಚುನಾವಣೆ ಸಂದರ್ಭಗಳಲ್ಲೂ ಹಲವಾರು ರೀತಿಯ ಭರವಸೆಗಳನ್ನು ನೀಡುವರು ಮತ್ತು ಇದನ್ನು ಈಡೇರಿಸುವುದಾಗಿ ಹೇಳುವರು. ಆದರೆ ಅದು ಐದು ವರ್ಷ ಕಳೆದರೂ ಈಡೇರುವುದೇ ಇಲ್ಲ. ಹೀಗಾಗಿ ಚುನಾವಣಾ ಸಮಯದಲ್ಲಿ ರಾಜಕಾರಣಿಗಳು ಪ್ರಚಾರಕ್ಕೆ ಬರುವ ವೇಳೆ ನಾವು ಅವರ ಭರವಸೆಗಳ ಬಗ್ಗೆ ಪ್ರಶ್ನೆ ಮಾಡಬಹುದು. ಸ್ಥಳೀಯ ನಾಯಕರಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಹಿ ಮಾಡುವಂತೆ ಹೇಳಬಹುದು ಅಥವಾ ಪ್ರತಿಜ್ಞೆ ಮಾಡಿಸಬಹುದು. ಚುನಾವಣೆ ಸಂದರ್ಭದಲ್ಲಿ ಹಣಕ್ಕಾಗಿ ಮತ ಚಲಾಯಿಸುವುದು ಮತ್ತು ಪಡೆಯುವುದು ಕೂಡ ಭ್ರಷ್ಟಾಚಾರದ ಒಂದು ಭಾಗವಾಗಿದೆ. ಮತದಾರರು ಕೂಡ ತಮ್ಮ ಹಕ್ಕನ್ನು ಹಣಕ್ಕಾಗಿ ಮಾರುವುದು ಸರಿಯಲ್ಲ. ಅದು ನಮ್ಮ ಸಾಂವಿಧಾನಿಕ ಹಕ್ಕು. ಅದನ್ನು ನಾವು ನಮ್ಮ ವಿವೇಚನೆಗೆ ಸರಿಹೊಂದುವಂತೆ ಯಾರಿಗೆ ಬೇಕಾದರೂ ನೀಡಬಹುದು. ಯಾವುದೇ ಪ್ರಲೋಭನೆಗಳಿಗೂ ಬಲಿಯಾಗುವುದು ಉಚಿತವಲ್ಲ. ಹೀಗೆ ನಮಗೆ ಸಾಧ್ಯವಾಗುವಂತೆ ಭ್ರಷ್ಟಾಚಾರ ವಿರೋಧಿ ದಿನದಂದು ನಮ್ಮ ಅಳಿಲು ಸೇವೆಯನ್ನು ಸಲ್ಲಿಸಲು ಮನಸ್ಸು ಮಾಡಬಹುದು.
ಅಲ್ಲದೆ ಭ್ರಷ್ಟಾಚಾರವನ್ನು ತೊಡೆದುಹಾಕಲು ಪ್ರತಿಯೊಂದು ದೇಶದ ಸರ್ಕಾರಿ ಅಧಿಕಾರಿಗಳು, ನಾಗರಿಕ ಸೇವಕರು, ಕಾನೂನು ಜಾರಿ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು, ಖಾಸಗಿ ವಲಯ, ನಾಗರಿಕ ಸಮಾಜ, ಶಿಕ್ಷಣ ತಜ್ಞರು, ಸಾರ್ವಜನಿಕರು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಾಗಿದೆ. ಆಗ ಮಾತ್ರ ಒಂದು ದೇಶವು ಭ್ರಷ್ಟಚಾರ ಮುಕ್ತವಾಗಿ ಅಭಿವೃದ್ಧಿಯ ಕಡೆಗೆ ಮುಂದುವರೆಯಲು ಸಾಧ್ಯ
*ಸಂಗ್ರಹ : ವನಜಾಕ್ಷಿ ಪಿ ಚೆಂಬ್ರಕಾನ *

0 Comments