ಕಾಸರಗೋಡು: ಯುವತಿಯನ್ನು ಕಾರಿನಲ್ಲಿ ಅಪಹರಿಸಿ, ಬಲವಂತವಾಗಿ ಮದ್ಯ ಕುಡಿಸಿ, ನಂತರ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಇಬ್ಬರು ಆಟೋ ಚಾಲಕರನ್ನು ಬಂಧಿಸಲಾಗಿದೆ. ಮಂಗೋಟೆಯ ಪ್ರವೀಣ್ ಅಲಿಯಾಸ್ ಧನೇಶ್ (36) ಮತ್ತು ರಾಹುಲ್ (29) ಅವರು ಬಂಧಿತ ಆರೋಪಿಗಳಾಗಿದ್ದಾರೆ. ಭೀಮನಡಿ ಎಂಬಲ್ಲಿ ಸುಮಾರು 29 ವರ್ಷದ ಯುವತಿ ಮನೆಗೆ ಹೋಗಲು ವಾಹನಕ್ಕಾಗಿ ಕಾಯುತ್ತಿದ್ದಳು. ಈ ಸಂದರ್ಭ ಕಾರಿನೊಂದಿಗೆ ಬಂದಿದ್ದ ಧನೇಶ್, ಲಿಫ್ಟ್ ನೀಡುವುದಾಗಿ ಹೇಳಿ ಆಕೆಯನ್ನು ಕಾರಿನಲ್ಲಿ ಹತ್ತಿಸಿಕೊಂಡು ಆಕೆಯನ್ನು ಬಿಡಬೇಕಾದ ಸ್ಥಳದಲ್ಲಿ ಇಳಿಸದೆ ಕಾರನ್ನು ನೇರವಾಗಿ ಚಲಾಯಿಸಿದನು. ಕಾರು ಅಂಬಾಡಿ ಬಜಾರ್ ಪ್ರದೇಶ ತಲುಪಿದಾಗ, ಆಕೆಗೆ ಬಲವಂತವಾಗಿ ಮದ್ಯ ಕುಡಿಸಿ ಮಿತ್ರನಾದ ರಾಹುಲ್‌ಗೆ ಕರೆ ಮಾಡಿ ನಂತರ ಇಬ್ಬರೂ ಸೇರಿ ಅತ್ಯಾಚಾರ ಮಾಡಿದರು. ಮಹಿಳೆ ಗಲಾಟೆ ಮಾಡಿದಾಗ, ಆಕೆಯನ್ನು ಮಾಂಗೋಡ್ ರಸ್ತೆಯಲ್ಲಿ ಇಳಿಸಿ ಕಾರಿನೊಂದಿಗೆ ಪರಾರಿಯಾಗಿದ್ದರು. ಮಹಿಳೆ ಅಸ್ತವ್ಯಸ್ತ ಸ್ಥಿತಿಯಲ್ಲಿ ಮನೆಗೆ ತಲುಪಿ ಮನೆಯವರಿಗೆ ವಿಷಯ ತಿಳಿಸಿದಳು. ಮನೆಯವರು ಪೊಲೀಸರಿಗೆ ಮಾಹಿತಿ ನೀಡಿ, ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಮಹಿಳೆಯಿಂದ ವಿವರವಾದ ಹೇಳಿಕೆಯನ್ನು ಪಡೆದ ಬಳಿಕ ಧನೇಶ್ ಮತ್ತು ರಾಹುಲ್ ಅವರನ್ನು ಬಂಧಿಸಲಾಯಿತು. ಚಿತ್ತಾರಿಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಎ. ಅನಿಲ್‌ಕುಮಾರ್ ಅವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಗಳಿಗೆ ಎರಡು ವಾರಗಳ ಕಾಲ ರಿಮಾಂಡ್ ವಿಧಿಸಲಾಗಿದೆ.

0 Comments