ಪಾಣಾಜೆ: ಆರ್ಲಪದವು ಜಾಂಬ್ರಿ ಕಾಡಿನ ಮಧ್ಯೆ ಭರಣ್ಯ ಸುಡುಕುಳಿ ಎಂಬಲ್ಲಿ ರಾತ್ರಿ ಚಿರತೆ ಕಾಣಿಸಿದ್ದಾಗಿ ಹೇಳಲಾಗಿದೆ. ದೇಲಂಪಾಡಿ ಮುಳ್ಳೇರಿಯ ಕುಂಬಳೆ ರೂಟ್ ಬಸ್ ಚಾಲಕ ಸುಡುಕುಳಿಯ ಉದಯ ಕುಮಾರ್ ಕರ್ತವ್ಯ ಮುಗಿಸಿ ದೇಲಂಪಾಡಿಯಿಂದ ಬೈಕ್ ನಲ್ಲಿ ಮರಳುವಾಗ ಮನೆ ಸಮೀಪ ಭರಣ್ಯ ಸುಡುಕುಳಿ ತಿರುವಿನಲ್ಲಿ ಚಿರತೆ ಎದುರಾಗಿದೆ ಎನ್ನಲಾಗುತ್ತಿದೆ. ರಸ್ತೆಯ ಒಂದು ಭಾಗದಲ್ಲಿ ದೊಡ್ಡ ಬರೆಯಿರುವ ಜಾಗದಲ್ಲಿ ದಿಢೀರ್ ಬೈಕ್ ಎದುರಾದಾಗ ಚಿರತೆಗೆ ದಿಕ್ಕು ತೋಚದಂತಾಗಿ ಇನ್ನೊಂದು ಬದಿಗೆ ಓಡಿದೆ. 'ನಿನ್ನೆ ಬಸ್ ದುರಸ್ತಿ ಕೆಲಸ ಮಾಡಲಾಗಿದ್ದು ಮನೆಗೆ ಬರುವಾಗ ತಡವಾಗಿದೆ. ದೇಲಂಪಾಡಿ, ಮೈಂದನಡ್ಕ ದಾರಿಯಾಗಿ ಸುಮಾರು 8.30ರ ಸುಮಾರಿಗೆ ಮನೆ ಸಮೀಪ ತಲುಪುತ್ತಿದ್ದಂತೆ ರಸ್ತೆಯಲ್ಲಿ ಚಿರತೆ ಎದುರಾಗಿದೆ. ತುಂಬಾ ಭಯಗೊಂಡೆ. ಏನು ಮಾಡಬೇಕೆಂದು ತೋಚಲಿಲ್ಲ. ನನಗಿಂತಲೂ ಹೆಚ್ಚು ಚಿರತೆ ಗಲಿಬಿಲಿಗೊಂಡಿದೆ' ಎಂದು ಉದಯಕುಮಾರ್ ತಿಳಿಸಿದ್ದಾರೆ. ವಿಷಯ ತಿಳಿದು ರಾತ್ರಿ ಸುಡುಕುಳಿಯಲ್ಲಿ ಜನ ಸೇರಿದ್ದಾರೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕೇಳಿದ್ದಾರೆ. ಕಳೆದ ವಾರ ಜಾಂಬ್ರಿ ಕಾಡಿನಲ್ಲಿ ತನಗೂ ಚಿರತೆ ಕಾಣಿಸಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಯೋರ್ವ ಹೇಳಿರುವುದು ಚರ್ಚಾಸ್ಪದ ವಿಷಯವಾಗಿದೆ. ಚಿರತೆಯನ್ನು ನೋಡಿಯೂ ಆ ಬಗ್ಗೆ ಯಾಕೆ ಮಾಹಿತಿ ನೀಡಿಲ್ಲ ಎಂದು ಸ್ಥಳೀಯರು ಪ್ರಶ್ನಿಸಿದ್ದು ಅರಣ್ಯ ಇಲಾಖೆ ಸ್ಥಳೀಯರ ಪ್ರಾಣದೊಡನೆ ಚೆಲ್ಲಾಟವಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು. ಕಾಸರಗೋಡು ಜಿಲ್ಲೆಯ ಬೇಡಡ್ಕ ಪಂಚಾಯಿತಿಯ ಕೊಳತ್ತೂರಿನಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿದ ಬೋನೊಳಗೆ ಸಿಲುಕಿದ ಚಿರತೆಯನ್ನು ಕೇರಳ ಕರ್ನಾಟಕ ವ್ಯಾಪ್ತಿಯ ಬಂಟಾಜೆ ರಕ್ಷಿತಾರಣ್ಯ ಜಾಂಬ್ರಿ ಪ್ರದೇಶದಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ತೆರೆದು ಅರಣ್ಯಕ್ಕೆ ಬಿಟ್ಟಿರುವುದೇ ಈ ಪರಿಸರವಾಸಿಗಳ ಆತಂಕ ಮನೆ ಮಾಡಲು ಮುಖ್ಯ ಕಾರಣವಾಗಿದೆ.

0 Comments