Ticker

6/recent/ticker-posts

Ad Code

ತುಳುನಾಡಿನ ಕೆಡ್ಡಸ – ಪ್ರಕೃತಿ ಮತ್ತು ಸಂಪ್ರದಾಯಗಳ ಸಂಗಮ

 

ಕೆಡ್ಡಸ (ಕೆಡ್ಡಸೊ) ತುಳುನಾಡಿನ ಸಾಂಪ್ರದಾಯಿಕ ಫಲವತ್ತತೆ ಹಬ್ಬವಾಗಿದ್ದು, ಭೂಮಿತಾಯಿ ಋತುಮತಿಯಾಗಿ ಫಲವತ್ತಾಗುತ್ತಾಳೆ ಎಂಬ ನಂಬಿಕೆಯಲ್ಲಿ ಫೆಬ್ರವರಿ ತಿಂಗಳಲ್ಲಿ 3-4 ದಿನಗಳ ಕಾಲ ಆಚರಿಸಲಾಗುತ್ತದೆ. ಇದು ಕೃಷಿ, ಪ್ರಕೃತಿ ಹಾಗೂ ಆಧ್ಯಾತ್ಮಿಕ ನಂಬಿಕೆಗಳೊಂದಿಗೆ ಆಳವಾಗಿ ಬೆಸೆದುಕೊಂಡಿರುವ ಆಚರಣೆ. ಈ ಅವಧಿಯಲ್ಲಿ ಭೂಮಿಯಲ್ಲಿ ಕೃಷಿ ಕೆಲಸಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಇದರಿಂದ ಭೂಮಿಗೆ ವಿಶ್ರಾಂತಿ ಸಿಗುತ್ತದೆ ಮತ್ತು ಮುಂದಿನ ಬೆಳೆಗೆ ಶಕ್ತಿ ತುಂಬುತ್ತದೆ ಎಂಬ ನಂಬಿಕೆ ಇದೆ. 

'ಕೆಡ್ಡಸ’ ಎಂಬ ಪದಕ್ಕೆ ಕೆಲಸ ನಿಲ್ಲಿಸುವುದು ಅಥವಾ ವಿರಾಮ ಎಂಬ ಅರ್ಥವಿದೆ. ತುಳುನಾಡಿನ ಜನರು ಭೂಮಿಯನ್ನು ತಾಯಿಯಾಗಿ ಕಂಡು, ಅವಳ ಆರೋಗ್ಯಕ್ಕೂ ವಿಶ್ರಾಂತಿಯ ಅಗತ್ಯವಿದೆ ಎಂದು ನಂಬುತ್ತಾರೆ. ಈ ಸಂದರ್ಭದಲ್ಲಿ ಭೂಮಿಯನ್ನು ಅಗೆಯುವುದು, ಮರ ಕಡಿಯುವುದು ನಿಷಿದ್ಧವಾಗಿದ್ದು, ಪ್ರಕೃತಿಯನ್ನು ಪೂಜಿಸಿ, ವಿಶೇಷ ತಿಂಡಿ-ತಿನಿಸುಗಳನ್ನು ಸವಿಯುವ ಮೂಲಕ ಭೂಮಿಗೆ ವಿಶ್ರಾಂತಿ ನೀಡಲಾಗುತ್ತದೆ. 

ಮೂರು ದಿನಗಳ ಆಚರಣೆಯನ್ನು ಶುರು ಕೆಡ್ಡಸ, ನಡುಕೆಡ್ಡಸ, ಮತ್ತು ಕಡೆಕೆಡ್ಡಸ ಎಂದು ಕರೆಯುತ್ತಾರೆ. ಮಹಿಳೆಯರು ಅಂಗಳವನ್ನು ಸಾರಿಸಿ, ಗೋಮಯದಿಂದ ಶುದ್ಧೀಕರಿಸಿ, ಭೂ ದೇವಿಗೆ ಸ್ನಾನಕ್ಕೆ ಅಗತ್ಯವಿರುವ ಸೀಗೆ, ಅರಶಿನ, ಎಣ್ಣೆ ಇಟ್ಟು ಪೂಜಿಸುತ್ತಾರೆ. ತುಳಸಿ ಕಟ್ಟೆಯ ಸುತ್ತ ಹಸುವಿನ ಸಗಣಿಯನ್ನು ಸಾರಿಸಿ  ದೀಪ ಬೆಳಗಲಾಗುತ್ತದೆ. ಇದರ ಜೊತೆಯಲ್ಲಿ ಕುಂಕುಮ, ಸೀಗೆ ಕಾಯಿಯನ್ನು ಕಟ್ಟೆಯ ಮುಂದೆ ಬಾಳೆಎಲೆಯಲ್ಲಿ ಬಡಿಸುತ್ತಾರೆ. ನಂತರ  ತೆಂಗಿನ ಎಣ್ಣೆಯನ್ನು ಮಣ್ಣಿಗೆ ಸುರಿಯುತ್ತಾರೆ (ಇದು ಭೂಮಿತಾಯಿಗೆ ಮಾಡುವ ಅಭಿಷೇಕ ಎಂಬ ನಂಬಿಕೆ). ಕೆಡ್ಡಸದ ಸಮಯದಲ್ಲಿ ಮನೆಯೊಳಗೆ ಮತ್ತು ಹೊಲದಲ್ಲಿ ವಿಶೇಷ ಶುದ್ಧತಾ ಕ್ರಮಗಳನ್ನು ಪಾಲಿಸಲಾಗುತ್ತದೆ. ಹೊಲದಲ್ಲಿ ಕೆಲಸ ಮಾಡದೆ, ಕೃಷಿ ಉಪಕರಣಗಳನ್ನು ಸ್ವಚ್ಛಗೊಳಿಸಿ ಇಡಲಾಗುತ್ತದೆ. ಕೆಲ ಪ್ರದೇಶಗಳಲ್ಲಿ ಮನೆಗಳಲ್ಲಿ ವಿಶೇಷ ಆಹಾರಗಳನ್ನು ತಯಾರಿಸಿ ಕುಟುಂಬದವರೊಂದಿಗೆ ಸೇವಿಸುವ ಪದ್ಧತಿ ಇದೆ.  ಕೆಡ್ಡಸದ ಸಮಯದಲ್ಲಿ  'ಸಾರ್ನಡ್ಡೆ(ತುಳುನಾಡಿನ ಖಾದ್ಯ)' ಮತ್ತು ವಿವಿಧ ಭಕ್ಷ್ಯಗಳನ್ನು ತಯಾರಿಸಿ ತುಳಸಿ ಕಟ್ಟೆಯ ಮುಂದೆ ಇಡಲಾಗುತ್ತದೆ. ಕೆಡ್ಡಸ ಸಮಯದಲ್ಲಿ 'ಕುಡು ಅರಿ' ಅಥವಾ 'ನನ್ಯೆರಿ' (ಹುರುಳಿ,ಹೆಸರು ಕಾಳು, ಒಣಗಿದ ತೆಂಗಿನಕಾಯಿ,ಕುಚ್ಚುಲಕ್ಕಿ ಅಕ್ಕಿ , ಬೆಲ್ಲ ಮತ್ತು ಕಡಲೆಕಾಯಿಗಳ ಮಿಶ್ರಣ)ಯನ್ನು ಎಲ್ಲರಿಗೂ ಹಂಚಲಾಗುವುದು. ಏಕೆಂದರೆ ಚಳಿಗಾಲದಲ್ಲಿ ದೇಹಕ್ಕೆ ಬೇಕಾದ ಬಹಳಷ್ಟು ಪೌ‌‍‍ಷ್ಟಿಕಾಂಶಗಳನ್ನು ಮತ್ತು ಎಣ್ಣೆ ಅಂಶಗಳನ್ನು ಇದು ಒದಗಿಸುತ್ತದೆ. ಈ ಮಿಶ್ರಣವು ದೇಹವು ಚಟುವಟಿಕೆಯಿಂದಿರಲು ಸಹಾಯವಾಗುತ್ತದೆ 

'ಕೆಡ್ಡಸ' ಎಂಬ ಪದ  'ಕೇಟ', ಎಂದರೆ 'ಬೇಟೆ' ಎಂಬ ಅರ್ಥವನ್ನೂ ನೀಡುತ್ತದೆ. ಕೆಡ್ಡಸ ಆಚರಣೆಯ ಎರಡನೇ ದಿನವನ್ನು 'ನಡುಕೆಡ್ಡಸ'ವೆಂದು ಕರೆದು ಆ ದಿನ 'ಕೆಡ್ಡಸ'ದ ಬೇಟೆಯನ್ನು ನಡೆಸುತ್ತಾರೆ. ಕೆಡ್ಡಸಾಚರಣೆಯಲ್ಲಿ ಮಾಂಸದೂಟ ಮಾಡಲೇ ಬೇಕೆಂಬ ನಂಬಿಕೆಯೂ ಇದೆ. ಈ ಸಂದರ್ಭದಲ್ಲಿ ಕಾಡುಪ್ರಾಣಿಗಳಿಗೆ ಕಾಲು ಒಡೆಯುವ ರೋಗ ಬರುತ್ತದೆ ಎಂದು ಜನ ನಂಬುತ್ತಾರೆ. ಋತುಮಾನದ ವ್ಯತ್ಯಾಸವಾಗಿ ಮೃಗಗಳಿಗೆ ಕಾಲುರೋಗ ಸಾಮಾನ್ಯವಾದರೂ, ಅದಕ್ಕಿಂತ ಮುಖ್ಯವಾಗಿ, ತಮ್ಮ ಬೆಳೆಗೆ ತೊಂದರೆಯನ್ನುಂಟು ಮಾಡುವ ಪ್ರಾಣಿಗಳ ಬೇಟೆ ಮಾಡಲು ಅವಕಾಶವಾಗುತ್ತದೆ. ನಡು ಕೆಡ್ಡಸದ ದಿನ ಪೂರ್ವ ನಿರ್ಧಾರದಂತೆ ಊರ ಜನ ಒಂದೆಡೆ ಸೇರುತ್ತಾರೆ. ಕಲ್ಲೊಂದನ್ನು ನೆಟ್ಟು - ಹಣ್ಣು - ತೆಂಗಿನಕಾಯಿ ಕಾಡು ಹೂಗಳನ್ನಿಟ್ಟು - ಕಾಡು ದೈವವನ್ನು ನೆನೆದು ಪ್ರಾರ್ಥಿಸುತ್ತಾರೆ. ಈಡೊಂದನ್ನು ಸಿಡಿಸುತ್ತಾರೆ. ಅರಣ್ಯ ಸೇರಿ ಗಡಿಭಾಗಗಳೆಲ್ಲಾ ಕೋವಿ-ಆಯುಧ ಹಿಡಿದವರು ನಿಲ್ಲುತ್ತಾರೆ. ಉಳಿದವರು ಕಾಡೊಳಗೆ ಬೊಬ್ಬೆ ಹಾಕುತ್ತಾ ಪ್ರಾಣಿಗಳನ್ನು ಓಡಿಸುತ್ತಾರೆ. ಬೇಟೆಯಾದರೆ ಆರಂಭದಲ್ಲಿ ಸೇರಿದಲ್ಲಿಗೆ ಮರಳಿ ಬರುತ್ತಾರೆ. ಬೇಟೆಯಾದ ಪ್ರಾಣಿಗಳನ್ನು ಬೇಟೆ ಮಾಡಿದವರಿಗೆ ನಿಯಮದಂತೆ, 'ಅಜಕಲು ಮಾಡಿ' ಮಾಂಸವನ್ನು ಹಂಚಿ ಉಳಿದ ಹೆಚ್ಚುವರಿ ಮಾಂಸವನ್ನು ಸೇರಿದ ಉಳಿದವರಿಗೆ ಸಮಾನವಾಗಿ ಹಂಚ್ಚುತ್ತಾರೆ. ಒಂದಷ್ಟು ಮಾಂಸವನ್ನು ಅಲ್ಲಿಯೆ ಅಡುಗೆ ಮಾಡಿ ಕಾಡ ದೈವಕ್ಕೆ ಬಡಿಸಿ ಬಳಿಕ ಪ್ರಸಾದವಾಗಿ ಸೇವಿಸುತ್ತಾರೆ.  ಆದರೆ  ಈಗ ಆಚರಣೆಗಳೆಲ್ಲಾ ಕಾಣಸಿಗುವುದಿಲ್ಲ. ಕೆಡ್ಡಸ ಆಚರಣೆಯಲ್ಲಿ 'ಮಾಂಸದೂಟ' ಮಾಡದಿದ್ದರೆ 'ದೇಹದ ಎಲುಬು' ನುಚ್ಚು ನೂರಾಗುತ್ತದೆ ಎಂಬ ನಂಬಿಕೆ ಇದೆ. ಅದಕ್ಕನುಗುಣವಾಗಿ ಬೇಟೆಯನ್ನು ಮಾಂಸದಡುಗೆಗೆ ಪೂರಕವಾಗಿಸುವ ಆಶಯ ಹೊಂದಿಸಿಕೊಳ್ಳಲಾಗಿದೆ.  ಬೇಟೆಯಲ್ಲಿ ಬೇಟೆಯಾಗದಿದ್ದರೆ ಬದನೆ-ನುಗ್ಗೆ ಕಾಯಿಯನ್ನಾದರೂ ಅಡುಗೆ ಮಾಡಲೇಬೇಕೆಂಬ ನಂಬಿಕೆಯಿದೆ. 

ತುಳುನಾಡಿನ ಭೂತಾರಾಧನೆ ಪದ್ಧತಿಯಲ್ಲೂ ಕೆಡ್ಡಸಕ್ಕೆ ವಿಶೇಷ ಸ್ಥಾನವಿದೆ. ಈ ಸಮಯದಲ್ಲಿ ಭೂತಗಳು ಭೂಮಿಯಲ್ಲಿ ಸಂಚರಿಸುತ್ತವೆ ಎಂಬ ನಂಬಿಕೆ ಇರುವುದರಿಂದ, ಅವುಗಳನ್ನು ಗೌರವಿಸಿ ಶಾಂತಿ ಕಾಪಾಡುವ ಆಚರಣೆಗಳು ನಡೆಯುತ್ತವೆ. ಇದರಿಂದ ಮಾನವ ಮತ್ತು ಪ್ರಕೃತಿಯ ನಡುವೆ ಸಮತೋಲನ ಉಳಿಯುತ್ತದೆ ಎಂಬ ಭಾವನೆ ಜನರಲ್ಲಿ ಇದೆ.

ಕೆಡ್ಡಸ ಕೇವಲ ಒಂದು ಧಾರ್ಮಿಕ ಆಚರಣೆ ಅಲ್ಲ; ಇದು ಪರಿಸರ ಸಂರಕ್ಷಣೆ ಮತ್ತು ಸ್ಥಿರ ಕೃಷಿಯ ಒಂದು ಪ್ರಾಚೀನ ಜ್ಞಾನ. ಆಧುನಿಕ ಜೀವನಶೈಲಿಯಲ್ಲಿ ಈ ಸಂಪ್ರದಾಯಗಳು ನಿಧಾನವಾಗಿ ಕಡಿಮೆಯಾಗುತ್ತಿದ್ದರೂ, ತುಳುನಾಡಿನ ಜನರು ಇಂದಿಗೂ ಇದನ್ನು ಗೌರವದಿಂದ ಪಾಲಿಸುತ್ತಿದ್ದಾರೆ.

 ತುಳುನಾಡಿನ ಕೆಡ್ಡಸ ಆಚರಣೆ ಪ್ರಕೃತಿಯೊಂದಿಗೆ ಮಾನವನ ಸಂಬಂಧವನ್ನು ನೆನಪಿಸುವ ಒಂದು ಅಮೂಲ್ಯ ಸಂಸ್ಕೃತಿ. ಇದೊಂದು ಸಾಮಾಜಿಕ ಬಂಧನವನ್ನು ಗಟ್ಟಿಗೊಳಿಸುವ ಸಂದರ್ಭವೂ ಹೌದು. ಇದು ನಮ್ಮ ಪಾರಂಪರಿಕ ಜ್ಞಾನವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸೇತುವೆಯಾಗಿದೆ.

ಸಂಗ್ರಹ ಲೇಖನ

Post a Comment

0 Comments