ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ, ನಡೆಸಿಕೊಂಡು ಬರುತ್ತಿರುವ ಕನ್ನಡ ಅಭ್ಯಾಸ ತರಗತಿಯ ವಿದ್ಯಾರ್ಥಿಗಳ ಸಾಧನಾ ಸಂಭ್ರಮ ಪ್ರಯುಕ್ತ ಹಮ್ಮಿಕೊಂಡ, 'ಕನ್ನಡ ಕಲಿಕಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲರವ - ಯಕ್ಷ ಕನ್ನಡ ಡಿಂಡಿಮ 2026' ಮಕ್ಕಳ ಪ್ರತಿಭಾ ವಿಕಾಸಕ್ಕೆ ವೇದಿಕೆ ಒದಗಿಸಿ, ಸೇರಿದ ಕನ್ನಡಾಭಿಮಾನಿಗಳ ಮೆಚ್ಚುಗೆಗೆ ಕಾರಣವಾಯಿತು. ದುಬಾಯಿ ಗೀಸೈಸ್ ನ ಫಾರ್ಚೂನ್ ಪ್ಲಾಝದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಯಕ್ಷಗಾನ ಮತ್ತು ಕನ್ನಡಾಭಿಮಾನಿಗಳ ಸಮ್ಮುಖ ಸಂಪನ್ನಗೊಂಡಿತು.
ಮಕ್ಕಳಿಂದಲೇ ನಿರ್ವಹಿಸಲ್ಪಟ್ಟ ಈ ಕಾರ್ಯಕ್ರಮ, ಹೆತ್ತವರ ಬೆಂಬಲದೊಂದಿಗೆ ಸಂಪೂರ್ಣ ಯಶಸ್ವಿಯಾಯಿತು. ನಾಡಗೀತೆಯೊಂದಿಗೆ ಪ್ರಾರಂಭವಾದ ಸಮಾರಂಭವನ್ನು ಕೇಂದ್ರದ ವಿದ್ಯಾರ್ಥಿನಿ ಶ್ರೀಶ ಪ್ರಭಾಕರ ಪೂಜಾರಿ ನಿರ್ವಹಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಇನ್ನೋರ್ವ ವಿದ್ಯಾರ್ಥಿನಿ ವೈಷ್ಣವಿ ಪದ್ಮಶಾಲಿಯವರು, ಅತಿಥಿ ಅಭ್ಯಾಗತರನ್ನು, ಮಾಧ್ಯಮ ಪ್ರತಿನಿಧಿಗಳ ಸಹಿತ ದುಬಾಯಿಯ ಪೋಷಕ ಮಹಾಶಯರು, ಹೆತ್ತವರು, ವಿದ್ಯಾರ್ಥಿಗಳು, ಕಾರ್ಯಕರ್ತರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಪುಟಾಣಿಗಳು ವೈವಿಧ್ಯಪೂರ್ಣ ಅಭಿನಯ ಗೀತೆಯಿಂದ ಸೇರಿದ ಪ್ರೇಕ್ಷಕರನ್ನು ರಂಜಿಸಿದರೆ, ಪುಟಾಣಿಗಳ ಇನ್ನೊಂದು ತಂಡ, ಗಾದೆ ಮಾತುಗಳ ವಿಶ್ಲೇಷಣಾತ್ಮಕ ವಿವರಣೆಗಳಿಂದ ಮಾತಿನ ಮಂಟಪ ಕಟ್ಟಿದರು. ಒಬ್ಬಾಕೆ ವಿದ್ಯಾರ್ಥಿ, ಅಕ್ಷರಮಾಲೆಯ ಕುರಿತಾಗಿ ದೃಶ್ಯ-ಶ್ರಾವ್ಯ ಸಹಿತ ಪ್ರಾತ್ಯಕ್ಷಿಕೆ ನೀಡಿದರೆ, ಮತ್ತೊಬ್ಬಾಕೆ, ಯಕ್ಷಗಾನ ಕವಿ ಪರಿಚಯದ ನೆಲೆಯಲ್ಲಿ ನವೋದಯ ಕನ್ನಡದ ಮುಂಗೋಳಿ ಎಂಬ ಖ್ಯಾತಿಯ ಯಕ್ಷಗಾನ ಪ್ರಸಂಗಕರ್ತ – ಕವಿ ಮುದ್ದಣನ ಬಗ್ಗೆ ಸೊಗಸಾದ ಪ್ರಾತ್ಯಕ್ಷಿಕೆಯ ಮೂಲಕ ಯಕ್ಷಗಾನ ಪ್ರಸಂಗದ ವಿಶೇಷ - ರಚನೆಗಳ ಕುರಿತು ಪ್ರೇಕ್ಷಕರ ಗಮನ ಸೆಳೆದರು. ಮಕ್ಕಳೇ ರಚಿಸಿದ ಛಂದೋಬದ್ಧ ಯಕ್ಷಗಾನದ ಸ್ತುತಿ ಪದ್ಯಗಳಿಗೆ ನಾಟ್ಯ ಪ್ರದರ್ಶನ ನಡೆಯಿತು. ಕವಿ ಕಾವ್ಯ – ಭಾಗವತರ ಕಂಠಸಿರಿಯ ಮೂಲಕ, ನಾಟ್ಯ ರೂಪಕ್ಕೆ ಸ್ಥಿತ್ಯಂತರಗೊಳ್ಳುವ ಬಗೆಯನ್ನು ಪ್ರೇಕ್ಷಕರೆದುರು ತೆರೆದಿಟ್ಟರು. ಪದ್ಯ ರಚನೆಯಲ್ಲಿ ಶ್ರೀಶ ಪ್ರಭಾಕರ ಪೂಜಾರಿ ಮತ್ತು ವೈಷ್ಣವಿ ಪದ್ಮಶಾಲಿ ತಮ್ಮ ಪ್ರತಿಭಾ ಅನಾವರಣ ಮಾಡಿದರೆ, ಶೈವಿ ಪ್ರಭಾಕರ ಪೂಜಾರಿ ಮತ್ತು ನ್ಯೋಮಿ ಸಾಯಿನಾಥ ಶೆಟ್ಟಿ ನಾಟ್ಯ ಚಾತುರ್ಯವನ್ನು ಪ್ರದರ್ಶಿಸಿದರು. ಕೇಂದ್ರದ ನಾಟ್ಯ ಗುರುಗಳಾದ ಶರತ್ ಕುಡ್ಲ ಮತ್ತು ಮದ್ದಳೆ ಗುರುಗಳಾದ ಸವಿನಯ ನೆಲ್ಲಿತೀರ್ಥ ತಂಡ, ಹಿಮ್ಮೇಳದಲ್ಲಿ ಸಹಕಾರ ನೀಡಿದರು. ಮಕ್ಕಳಿಂದ ಭಗವದ್ಗೀತೆ ಶ್ಲೋಕಾರ್ಥ ಪಠಣ ನಡೆಯಿತು. ವಿದ್ಯಾರ್ಥಿಗಳು ತಮ್ಮ ಸ್ವ ಹಸ್ತಾಕ್ಷರದಲ್ಲಿ ಬರೆದು ಪ್ರಕಟಿಸಿದ ಕಥೆ, ಕವನ, ಗಾದೆಮಾತು ಇತ್ಯಾದಿ ಮಾಹಿತಿಗಳನ್ನೊಳಗೊಂಡ ಭಿತ್ತಿಪತ್ರ ಪ್ರದರ್ಶನ ಜನರ ಗಮನ ಸೆಳೆಯಿತು.
ಬಳಿಕ ಕನ್ನಡ ಕವಿ ಕಾವ್ಯ ಕೂಜನ ಎಂಬ ನೂತನ ಪ್ರಯೋಗ ಪ್ರದರ್ಶನ ನಡೆಯಿತು. ಕನ್ನಡ ಕವಿ ಮತ್ತು ಕಾವ್ಯ ಕುರಿತಾದ ಮಾಹಿತಿಯೊಂದಿಗೆ ಗಾಯನ ಕಾರ್ಯಕ್ರಮ ನಡೆಯಿತು. ಈ ತಂಡ ಪ್ರದರ್ಶನದಲ್ಲಿ ಕೇಂದ್ರದ ಮಕ್ಕಳು ಮತ್ತು ಹೆತ್ತವರು ತಮ್ಮ ಸೊಗಸಾದ ಪ್ರಸ್ತುತಿಯ ಮೂಲಕ ಜನಮೆಚ್ಚುಗೆ ಪಡೆದರು.
ಮಕ್ಕಳೇ ಮುಖ್ಯ ವೇದಿಕೆಯಲ್ಲಿರುವ ಸಭಾ ಕಾರ್ಯಕ್ರಮ ನಡೆಯಿತು. ಯಕ್ಷಗಾನ ಅಭ್ಯಾಸ ಕೇಂದ್ರ ಸಂಚಾಲಕರಾದ ಕೊಟ್ಟಿಂಜ ದಿನೇಶ ಶೆಟ್ಟಿಯವರು ಘನ್ಯ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಸ್ಮರಣಿಕೆ ನೀಡಿ ಕೇಂದ್ರದ ವತಿಯ ಗೌರವ ಅರ್ಪಣೆ ಸಲ್ಲಿಸಿ ಆಶಯ ಭಾಷಣದ ಮೂಲಕ ಇಡೀ ಕಾರ್ಯಕ್ರಮದ ರೂಪುರೇಷೆ, ಉದ್ದೇಶ, ಕ್ರಮಿಸಬೇಕಾದ ಮಾರ್ಗ ಸಿದ್ಧತೆಗಳ ಕುರಿತಾದ ಹಿನ್ನೋಟ ಮುನ್ನೋಟಗಳನ್ನು ಒದಗಿಸಿದರು. ಮುಂದೆ ಬಾಲ ಅತಿಥಿಗಳಾಗಿ ಭಾಗವಹಿಸಿದ ಪುಟಾಣಿಗಳು ಕನ್ನಡ ಭಾಷೆ-ನುಡಿ, ದುಬಾಯಿಯಲ್ಲಿ ಕನ್ನಡ ಕಲಿಕೆಗೆ ಇರುವ ಸಾಧಕ – ಭಾದಕ, ನೆಲದ ಸಂಸ್ಕೃತಿ ಪರಿಚಯ ಅಗತ್ಯ, ಯಕ್ಷಗಾನಕ್ಕೂ ಕನ್ನಡಕ್ಕೂ ಇರುವ ನಂಟು, ಹೆಮ್ಮೆಗಳ ಕುರಿತು ಮಾತನಾಡಿದರು. ಅಬುಧಾಬಿ ಇಂಡಿಯನ್ ಸ್ಕೂಲ್ ನ 6ನೇ ತರಗತಿ ವಿದ್ಯಾರ್ಥಿನಿ ಅನ್ವಿ ಶೆಟ್ಟಿ 'ಕನ್ನಡ ಮತ್ತು ನೆಲದ ಸಂಸ್ಕೃತಿ'ಯ ಕುರಿತು ಮಾತನಾಡಿದರೆ, ದುಬಾಯಿ ಇಂಡಿಯನ್ ಹೈಸ್ಕೂಲ್ ನ 5ನೇ ತರಗತಿ ವಿದ್ಯಾರ್ಥಿನಿ ಅಗಣ್ಯ ನಾಗರಾಜ ಹೆಗ್ಡೆ – ಬಡಗುತಿಟ್ಟು ಯಕ್ಷಗಾನದ ಬಾಲ ಪ್ರತಿಭೆ 'ಯಕ್ಷಗಾನ ಮತ್ತು ಕನ್ನಡದ ನಂಟಿ'ನ ಕುರಿತು ಮಾತನಾಡಿದರು. ಶಾರ್ಜ ಜೆಮ್ಸ್ ಮಿಲೆನಿಯಮ್ ಸ್ಕೂಲ್ ನ ಕೆಜಿ 1 ರ ವಿದ್ಯಾರ್ಥಿನಿ ರಾಹಿತ್ಯ ಬಿ. ಶೆಟ್ಟಿ – ಬಾಲ ಪ್ರತಿಭೆ- ಕಾರ್ಯಕ್ರಮದ ಕೇಂದ್ರ ಬಿಂದುವಾಗಿ 'ದುಬೈ ಮಕ್ಕಳ ಕನ್ನಡ ಅಭ್ಯಾಸ ಕಷ್ಟ ಇಷ್ಟ'ಗಳ ಕುರಿತು ಮಾತನಾಡಿದರು.ಆ ಬಳಿಕ 'ರಾಕ್ ಕರ್ನಾಟಕ ಸಂಘ'ದ ನಿಕಟಪೂರ್ವ ಅಧ್ಯಕ್ಷರು ಸಂತೋಷ್ ಹೆಗ್ಡೆ ಮಾತನಾಡಿ ಇಂತಹ ಕನ್ನಡ ಪರ ಕಾರ್ಯಕ್ರಮಗಳ ಅಗತ್ಯ, ಯು ಎ ಇ ಯ ಯಕ್ಷಗಾನ ಅಭ್ಯಾಸ ಕೇಂದ್ರ ಮಕ್ಕಳಿಗಾಗಿ, ಮುಂದಿನ ಪೀಳಿಗೆಗೆ ಯಕ್ಷಗಾನ ಮತ್ತು ಕನ್ನಡವನ್ನು ಕೈ ದಾಟಿಸುವ ಪ್ರಯತ್ನವನ್ನು ಶ್ಲಾಘಿಸಿದರು. ಯಕ್ಷಗಾನ ಅಭ್ಯಾಸ ಕೇಂದ್ರದ ಬಾಲ ಕಲಾವಿದೆ, ಕೇಂದ್ರದ ಕನ್ನಡ ತರಗತಿಯ ಹಿರಿಯ ವಿದ್ಯಾರ್ಥಿನಿ ಇಷೀತ ಶೇಖರ್ ಪೂಜಾರಿ, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕೇಂದ್ರದ ವಿದ್ಯಾರ್ಥಿಯಾಗಿ ಸಿಕ್ಕಿದ ಈ ಬಹುದೊಡ್ಡ ಅವಕಾಶಕ್ಕಾಗಿ ವಂದನೆ ಸಲ್ಲಿಸುತ್ತಾ, ಈ ಕಾರ್ಯಕ್ರಮ ತನಗೂ ಮತ್ತು ಇಲ್ಲಿಯ ಉಳಿದ ವಿದ್ಯಾರ್ಥಿಗಳಿಗೂ ಮತ್ತಷ್ಟು ಕಲಿಕೆಯ ಸಾಧ್ಯತೆ, ಅವಕಾಶಗಳನ್ನು ತೆರೆದಿಟ್ಟಿದೆ. ಅವಕಾಶದ ಸದುಪಯೋಗ ವಿದ್ಯಾರ್ಥಿಗಳು ಮಾಡುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಪೂರ್ತಿ ಉಪಸ್ಥಿತರಿದ್ದು, ಸಂತೋಷಪಟ್ಟ ರವೀಂದ್ರ ಶೆಟ್ಟಿ, ರಕ್ಷಿತ ರೈ, ಮಾನಷಿ ಹೆಗಡೆ, ಯೂಟ್ಯೂಬರ್ ಸಂತೋಷ್ ಶೆಟ್ಟಿ ಪೊಳಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರದ ಸಂಚಾಲಕರಾದ ಕೊಟ್ಟಿಂಜ ದಿನೇಶ ಶೆಟ್ಟಿಯವರು ಮುಂದಿನ ದಿನಗಳಲ್ಲಿ ಇಂತಹ ಮೌಲ್ಯಯುತ ಕಾರ್ಯಕ್ರಮಗಳನ್ನು ದೊಡ್ಡ ವೇದಿಕೆಯಲ್ಲಿ ಪ್ರದರ್ಶಿಸುವ ಅಪೇಕ್ಷೆ -ಭರವಸೆಗಳನ್ನು ವ್ಯಕ್ತಪಡಿಸಿ, ಕೇಂದ್ರದ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ಅರುಂಧತಿ ಮನೋಹರ್ ಶೆಟ್ಟಿಗಾರ್ ಸಹಿತ ಶಿಕ್ಷಕ ಬಳಗವನ್ನು ಅಭಿನಂದಿಸಿದರು.
ಕೇಂದ್ರದ ಮತ್ತೋರ್ವ ಹಿರಿಯ ವಿದ್ಯಾರ್ಥಿನಿ ಯಶಸ್ವಿನಿ ಶೇಖರ್ ಪೂಜಾರಿ ಧನ್ಯವಾದ ಸಮರ್ಪಣೆ ಮಾಡಿದರು.
ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಮತ್ತು ಹೆತ್ತವರಿಂದ ವೈಭವಪೂರ್ಣ ನೃತ್ಯ ಕಾರ್ಯಕ್ರಮ ನಡೆಯಿತು. ಗೋವಿನ ಹಾಡು, ಪುಣ್ಯಕೋಟಿ ಬಹುಪ್ರಶಂಸೆಗೆ ಪಾತ್ರವಾದರೆ, ಪುಟಾಣಿಗಳ ತಂಡದ ಸ್ವಾಗತ ನೃತ್ಯ, ಮತ್ತು ಹೇ ಶಾರದೆ ನೃತ್ಯಗಳು ಹಾಗೂ “ಏನು ಕೊಡಾವ” ಹಾಡಿಗೆ ಹೆಜ್ಜೆ ಹಾಕಿದ ಹೆತ್ತವರ ತಂಡ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಕೇಂದ್ರದ ಕಲಾವಿದರಾದ ಪವಿತ್ರ ದೀಪಕ್ ಸುಳ್ಯ, ಅರುಂಧತಿ ಮನೋಹರ್ ಶೆಟ್ಟಿಗಾರ್, ಶರತ್ ಕುಡ್ಲ ಮೊದಲಾದವರು ಕೊರಿಯೋಗ್ರಫಿಯಲ್ಲಿ ಸಹಕರಿಸಿದರು. ಧ್ವನಿ ಮತ್ತು ಬೆಳಕು ವಸಂತ ಶೆಟ್ಟಿ, ಬಾಳೆಪುಣಿಗುತ್ತು. ಕೇಂದ್ರದ ಕಾರ್ಯಕರ್ತರ ಬಳಗ ಸಂಪೂರ್ಣ ಸಹಕಾರ ನೀಡಿದರು. ಜನ ಗಣ ಮನ ರಾಷ್ಟ್ರಗೀತೆಯ ಮೂಲಕ ಕಾರ್ಯಕ್ರಮಕ್ಕೆ ಮಂಗಳಾಚರಣೆ ಮಾಡಲಾಯಿತು.

.jpeg)
.jpeg)
0 Comments