ಏತಡ್ಕ : ದುರ್ಗಾಪರಮೇಶ್ವರಿ ಭಜನಾ ಮಂದಿರ ಏತಡ್ಕದ ಹದಿನಾಲ್ಕನೇ ವರ್ಷದ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಶ್ರದ್ಧಾಭಕ್ತಿ, ಶಿಸ್ತಿನ ಆಯೋಜನೆ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಯಶಸ್ವಿಯಾಗಿ ನೆರವೇರಿತು. ಮಹೋತ್ಸವದ ಅಂಗವಾಗಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ವೇದಮೂರ್ತಿ ಪಳ್ಳತ್ತಡ್ಕ ಶಿವಶಂಕರ ಭಟ್ ಅವರ ನೇತೃತ್ವದಲ್ಲಿ ವಿಧಿವಿಧಾನಗಳೊಂದಿಗೆ ಜರುಗಿತು. ಭಕ್ತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಭಕ್ತಿಪೂರ್ಣ ವಾತಾವರಣವನ್ನು ಕಲ್ಪಿಸಿದದು ಮಾತ್ರವಲ್ಲದೆ ಶ್ರೀ ದೇವರ ಪ್ರಸಾದ ಪಡೆದು ಕೃತಾರ್ಥರಾದರು. ಕಾರ್ಯಕ್ರಮದ ಪ್ರಮುಖ ಘಟ್ಟವಾಗಿ ದುರ್ಗಾ ಫ್ರೆಂಡ್ಸ್ ಕ್ಲಬ್‌ನ ಲಾಂಛನವನ್ನು ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘದ ಅಧ್ಯಕ್ಷ ಬಾಲಕೃಷ್ಣ ಕೆ.ಕೆ. ಕುಂಡಾಪು ಅವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಗಣ್ಯರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಭವ್ಯ ರಂಗಮಂದಿರದಲ್ಲಿ ಶಾರದಾ ಆರ್ಟ್ಸ್ ತಂಡದವರಿಂದ "ಕಥೆ ಎಡ್ಡೆ ಉಂಡು" ನಾಟಕ ಪ್ರದರ್ಶಿಸಲಾಯಿತು. ಗಡಿನಾಡ ಕಲಾನಿಧಿ ಕೃಷ್ಣ ಜಿ. ಮಂಜೇಶ್ವರ ಅವರ ಸಾರಥ್ಯದಲ್ಲಿ, ಜೆ.ಪಿ. ತುಮಿನಾಡು ರಚಿಸಿ ನಿರ್ದೇಶಿಸಿದ ಈ ನಾಟಕವು ಪ್ರೇಕ್ಷಕರಿಂದ ಭರ್ಜರಿ ಸ್ಪಂದನೆ ಪಡೆದು ಜನಮಾನಸದ ಮೆಚ್ಚುಗೆಗೆ ಪಾತ್ರವಾಯಿತು. ಧಾರ್ಮಿಕ ವಿಧಿವಿಧಾನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮನ್ವಯದೊಂದಿಗೆ ಮಹೋತ್ಸವವು ಸುವ್ಯವಸ್ಥಿತವಾಗಿ ಮತ್ತು ಯಶಸ್ವಿಯಾಗಿ ಸಂಪನ್ನಗೊಂಡಿತು.

0 Comments