ಕಾದರಗೋಡು : ಅಣಂಗೂರು ದಿ. ಪುರೋಹಿತ ಕೊಗ್ಗು ಆಚಾರ್ಯ,ಗೌರಮ್ಮ ದಂಪತಿಗಳ ಪುತ್ರ ಕೆ. ಉಪೇಂದ್ರ ಆಚಾರ್ಯ (81) ಇಂದು ಅಪರಾಹ್ನ ಮೊಗ್ರಾಲ್ ಪುತ್ತೂರು ಬೆದ್ರಡ್ಕದ ಉಜಿರೆಕೆರೆ ಬಳಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಇವರು ಮಕ್ಕಳಿಗಾಗಿ ಇರುವ ಕಥೆ ಪುಸ್ತಕಗಳು, ಚಿತ್ರಕಥೆ ಪುಸ್ತಕಗಳು, ಸಾಮಾನ್ಯ ಜ್ಞಾನಪುಸ್ತಕ,ಪಿ ಎಸ್ ಸಿ,ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಶಾಲೆ ಕಾಲೇಜು ಕಚೇರಿಗಳಿಗೆ ನಡೆದಾಡಿಕೊಂಡೇ ಹೋಗಿ ತಲುಪಿಸುತ್ತಿದ್ದರು. ಇವರ ಪುಸ್ತಕಗಳಿಗಾಗಿ ಕಾಯುತ್ತಿದ್ದ ಪುಸ್ತಕ ಪ್ರೇಮಿಗಳು ಕಾಸರಗೋಡಿನ ಸುತ್ತಮುತ್ತ ಇದ್ದರು. ಮಣಿಪಾಲ ಪವರ್ ಪ್ರೆಸ್ ನಲ್ಲಿ ಮುದ್ರಣ ತಂತ್ರಜ್ಞರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಅವರು ಕಾಸರಗೋಡಿನ ನಾಯಕ್ಸ್ ರಸ್ತೆಯಲ್ಲಿದ್ದ ಸಹಕಾರಿ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಪುಸ್ತಕಗಳನ್ನು ಶಾಲಾ ಕಚೇರಿಗಳಿಗೆ ಸರಬರಾಜು ಮಾಡಲು ಶುರು ಮಾಡಿದರು. ಆಚಾರ್ಯರ ಸಂಚಾರಿ ಪುಸ್ತಕ ಸೇವೆಯನ್ನು ಕನ್ನಡ ಮಲಯಾಳ ಪತ್ರಿಕೆಗಳು ಶ್ಲಾಘಿಸಿ ಬರೆದಿದ್ದವು.
ಕನ್ನಡ ಪುಸ್ತಕ ಪ್ರೇಮಿಯಾದ ಇವರು ಕನ್ನಡ ಸಮ್ಮೇಳನ ಇನ್ನಿತರ ಕಾರ್ಯಕ್ರಮಗಳಲ್ಲಿ ಪುಸ್ತಕಗಳನ್ನು ಕೊಂಡೋಗಿ ವಿಕ್ರಯಿಸುತ್ತಿದ್ದರಲ್ಲದೆ ಸಾಹಿತ್ಯ ಪ್ರೇಮಿಗಳ ಪ್ರೀತಿಗೆ ಪಾತ್ರರಾಗಿದ್ದರು. ವಯೋ ಸಹಜ ಅಸೌಖ್ಯದ ನಡುವೆಯೂ ಈ ಪುಸ್ತಕ ಕಾರ್ಯವನ್ನು ನಡೆಸುತ್ತಿದ್ದ ಇವರನ್ನು ವಿಶ್ವಕರ್ಮ ಸಾಹಿತ್ಯ ದರ್ಶನದ ವಿಶ್ವದರ್ಶನ ಸಮ್ಮೇಳನದಲ್ಲಿ ಸನ್ಮಾನಿಸಲಾಗಿತ್ತು.ಅವರು ಪುತ್ರ ದೀಪಕ್ ಆಚಾರ್ಯ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ಅವರ ಪತ್ನಿ ಸಾವಿತ್ರಿ ಅವರು ಏಳು ವರ್ಷಗಳ ಹಿಂದೆ ನಿಧನರಾಗಿದ್ದರು. ಅಂತ್ಯಕ್ರಿಯಾದಿಗಳು ಬೆದ್ರಡ್ಕದ ಉಜಿರೆಕೆರೆ ನಿವಾಸದಲ್ಲಿ ನಡೆಯಿತು.

0 Comments