Ticker

6/recent/ticker-posts

Ad Code

ಈ ಬಾರಿಯೂ ವಿಧಾನಸಭೆ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದಿಂದ ಕೆ. ಸುಂದರ ಸ್ಪರ್ಧೆಗಿಳಿಯಲು ಸಿದ್ಧತೆ

 

ಪೆರ್ಲ : ವಿಧಾನಸಭೆ ಚುನಾವಣೆಯಲ್ಲಿ ಮಂಜೇಶ್ವರ ಮಂಡಲದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಕೆ.ಸುಂದರ ತಿಳಿಸಿದ್ದಾರೆ. ಜನರ ಒತ್ತಾಯದ ಮೇರೆಗೆ ಈ ಬಾರಿಯೂ ಸ್ಪರ್ಧಿಸುತ್ತಿದ್ದೇನೆ. ಮಂಜೇಶ್ವರ ಮಂಡಲ ಅಭಿವೃದ್ಧಿಯಲ್ಲಿ ತುಂಬಾ ಹಿಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸೌಕರ್ಯವಿಲ್ಲ. ಈ ಬಾರಿ ತಾನು ಜಯಿಸುವ ಸಾಧ್ಯತೆಯಿದ್ದು, ಗೆದ್ದರೆ ಮಂಡಲದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಕೆ.ಸುಂದರ ತಿಳಿಸಿದ್ದಾರೆ. 

2016ರ ವಿಧಾನಸಭೆ ಚುನಾವಣೆಯಲ್ಲಿ ಮಂಜೇಶ್ವರದಲ್ಲಿ ಬಿಜೆಪಿ ಗೆಲುವು ನಿರೀಕ್ಷಿಸಿತ್ತು. ಆದರೆ ಕೆ.ಸುರೇಂದ್ರನ್ ಅವರ ಹೆಸರಿಗೆ ಸಾಮ್ಯತೆಯಿರುವ ಕೆ.ಸುಂದರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 467 ಮತಗಳನ್ನು ಪಡೆದಿದ್ದರು. ಆ ಚುನಾವಣೆಯಲ್ಲಿ, ಕೆ.ಸುರೇಂದ್ರನ್ 89 ಮತಗಳ ಅಂತರದಿಂದ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. 

2021ರ ಚುನಾವಣೆಯಲ್ಲಿ ಕೆ.ಸುಂದರ ಬಹುಜನ ಸಮಾಜವಾದಿ ಪಕ್ಷ (ಬಿ.ಎಸ್.ಪಿ)ಯ ಆನೆ ಚಿಹ್ನೆಯಡಿ ನಾಮಪತ್ರ ಸಲ್ಲಿಸಿದ್ದರೂ ಕೊನೆ ಕ್ಷಣ ನಾಮಪತ್ರ ಹಿಂತೆಗೆದುಕೊಂಡಿದ್ದರು. ಕೆ.ಸುರೇಂದ್ರನ್ ಸಮರ್ಥ ನಾಯಕನಾಗಿದ್ದು ಮಂಜೇಶ್ವರ ಕ್ಷೇತ್ರದಲ್ಲಿ ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದ್ದರು. 

ಕೆ.ಸುಂದರ ಅವರನ್ನು ಅಪಹರಿಸಿ, ಬೆದರಿಕೆಯೊಡ್ಡಿ ನಾಮಪತ್ರ ಹಿಂಪಡೆಯುವಂತೆ ಮಾಡಲಾಗಿದೆ ಎಂದು ಆರೋಪಿಸಿ ಎಲ್ ಡಿಎಫ್ ಅಭ್ಯರ್ಥಿ ವಿ.ವಿ.ರಮೇಶನ್ ದೂರು ನೀಡಿದ್ದರು. ಕೆ.ಸುರೇಂದ್ರನ್ ಹಾಗೂ ಐದು ಮಂದಿ ಬಿಜೆಪಿ ನಾಯಕರ ವಿರುದ್ಧ  2.5 ಲಕ್ಷ ರೂ. ಲಂಚ ಹಾಗೂ ಮೊಬೈಲ್ ಫೋನ್ ನೀಡಿ ನಾಮ ಪತ್ರ ಹಿಂತೆಗೆಸಿದ ಆರೋಪ ಹೊರಿಸಲಾಗಿತ್ತು.

ಕೆ.ಸುರೇಂದ್ರನ್ ಹಾಗೂ ಇತರ ಆರೋಪಿಗಳ ವಿರುದ್ದ ಪ್ರಜಾಪ್ರಭುತ್ವ ಕಾನೂನಿನ 171 ಬಿ., ಇ. ಅಡಿ ಚುನಾವಣೆಯಲ್ಲಿ ಪ್ರಭಾವ ಬೀರಲು ಯತ್ನಿಸಿದ ಆರೋಪ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ, ಅಪಹರಣ ಮತ್ತು ಬೆದರಿಕೆ, ಸಾಕ್ಷ್ಯ ನಾಶ, ಅಕ್ರಮ ಬಂಧನ, ಚುನಾವಣೆಯಲ್ಲಿ ಲಂಚ ನೀಡುವುದು ಮುಂತಾದ ಜಾಮೀನು ರಹಿತ ಸೆಕ್ಷನ್‌ಗಳ ಅಡಿ ಆರೋಪ ಹೊರಿಸಿ ಕ್ರೈಂ ಬ್ರ್ಯಾಂಚ್ ಆರೋಪ ಪಟ್ಟಿ ಸಲ್ಲಿಸಿತ್ತು. ಕಾಸರಗೋಡು ಪ್ರಧಾನ ಸೆಷನ್ಸ್ ನ್ಯಾಯಾಲಯ ಕೆ.ಸುರೇಂದ್ರನ್ ಸಹಿತ ಎಲ್ಲರನ್ನು ಖುಲಾಸೆಗೊಳಿಸಿದೆ. 

ಎಣ್ಮಕಜೆ ಪಂಚಾಯತಿ ಪಡ್ರೆ ವಾಣೀನಗರ ಕುತ್ತಾಜೆ ನಿವಾಸಿ ಸುಂದರ ಪ್ರಸ್ತುತ ಎಲ್ ಡಿಎಫ್ ಆಡಳಿತದ ಕಾಸರಗೋಡು ಚೆಂಗಳದ ಸಹಕಾರಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Post a Comment

0 Comments