ನ್ಯೂಯಾರ್ಕ್ : ದುಷ್ಕರ್ಮಿಯೊಬ್ಬ ಅಮಾಯಕರ ಮೇಲೆ ಮನಬಂದಂತೆ ಗುಂಡು ಹಾರಿಸಿ ಇಬ್ಬರು ವಿದ್ಯಾರ್ಥಿಗಳನ್ನು ಹತ್ಯೆ ಮಾಡಿರುವ ಘಟನೆ ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ನಡೆದಿದೆ. ಮೃತಪಟ್ಟವರ ಪೈಕಿ ಒಬ್ಬ ವಿದ್ಯಾರ್ಥಿನಿ ಭಾರತೀಯ ಮೂಲದವಳಾಗಿದ್ದಾಳೆ ಎಂದು ತಿಳಿದು ಬಂದಿದೆ.
ಗುಂಡಿನ ದಾಳಿಯಲ್ಲಿ ಮೃತಪಟ್ಟ ಭಾರತೀಯ ಮೂಲದ ವಿದ್ಯಾರ್ಥಿನಿಯನ್ನು ಸವಿತಾ ಶಾನ್ (21) ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಇತರೆ 14 ಜನರು ಗಾಯಗೊಂಡಿದ್ದಾರೆ. ದಾಳಿಕೋರನನ್ನು ಸೆನೆಗಲ್‌ನ ವಲಸೆಗಾರ ನ್ಡಿಯಾಗಾ ಡಯಾಗ್ನೆ (53) ಎಂದು ಗುರುತಿಸಲಾಗಿದೆ. ಈತನಿಗೆ ಭಯೋತ್ಪಾದಕ ಚಟುವಟಿಕೆಗಳ ಸಂಬಂಧವಿರುವ ಮಾಹಿತಿ ಇದೆ. ತನಿಖೆ ನಡೆಸುತ್ತಿದ್ದೇವೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ)ನ ಆ್ಯಕ್ಟಿಂಗ್ ಸ್ಪೆಷಲ್ ಏಜೆಂಟ್ ಅಲೆಕ್ಸ್ ಡೋರನ್ ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ಸಾವನ್ನು ಟೆಕ್ಸಾಸ್ ವಿವಿಯ ಅಧ್ಯಕ್ಷ ಜಿಮ್ ಡೇವಿಸ್ ದೃಢಪಡಿಸಿದ್ದಾರೆ. ಇಮೇಲ್ ಮೂಲಕ ತಮ್ಮ ಕ್ಯಾಂಪಸ್‌ಗೆ ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಸವಿತಾ ಶಾನ್ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ನಿರ್ವಹಣಾ ಮಾಹಿತಿ ವ್ಯವಸ್ಥೆಗಳಲ್ಲಿ ಬ್ಯಾಚುಲರ್ ಪದವಿ ಪಡೆಯುತ್ತಿದ್ದರು. ಈ ವರ್ಷ ಪದವಿ ಪಡೆಯುವ ನಿರೀಕ್ಷೆ ಹೊಂದಿದ್ದರು. ಅಲ್ಲದೇ ಆಸ್ಟಿನ್ ತಮಿಳು ಸಂಗಮ್‌ನಲ್ಲಿ ಸ್ವಯಂಸೇವಕರಾಗಿದ್ದರು.

0 Comments