Ticker

6/recent/ticker-posts

Ad Code

ಮಕ್ಕಳ ರಂಗ ಭೂಮಿಗೊಂದು ಧನಾತ್ಮಕ ಪ್ರೇರಣೆಯಾಗಿ ಮನರಂಜಿಸಿದ ರಂಗತಜ್ಞ ಸದಾಶಿವ ಬಾಲಮಿತ್ರ ನಿರ್ದೇಶನದ "ಜೀವನ ಯಾತ್ರೆ " ಮಕ್ಕಳ ನಾಟಕ

 

ಕುಂಬಳೆ : ಗಡಿನಾಡದ ಕಾಸರಗೋಡಿನ ಮಕ್ಕಳ ರಂಗಭೂಮಿಯನ್ನು ಸದಾ ಜಾಗೃತವಾಗಿಡುವಲ್ಲಿ ಸದಾಶಿವ ಬಾಲಮಿತ್ರ ಎಂಬ ಅಧ್ಯಾಪಕನ ಕಲಾತ್ಮ‌ಕ ಕೈಚಳಕ ಅದ್ಭುತವಾದದ್ದು. ಇವರು ರಚಿಸುವ, ನಿರ್ದೇಶಿಸುವ ನಾಟಕಗಳು ಗಡಿ- ಭಾಷೆ - ದೇಶ ದಾಟಿ ರಂಗಭೂಮಿಯಲ್ಲೊಂದು ಸಂಚಲನ ಸೃಷ್ಠಿಗೆ ಮತ್ತು ಮಕ್ಕಳ ನಡುವೆ ಕನ್ನಡತನದ ಅಳಿವು ಉಳಿವಿಗೊಂದು ಸದ್ದಿಲ್ಲದೆ ಉದಾತ್ತ ಕೊಡುಗೆಯಾಗುತ್ತಾ ಬಂದಿದೆ. ಇದೀಗ ಕಿದೂರು ಎಎಲ್ ಪಿ ಶಾಲೆಯ ನಾಲ್ಕನೇ ತರಗತಿಯ ಎಲ್ಲಾ ಮಕ್ಕಳನ್ನು  ಜೊತೆಗೂಡಿಸಿ ರಂಗಾಭಿನಯದ ಮಹಾ ಸಮುದ್ರಕ್ಕೆ ಧುಮ್ಮಿಕ್ಕಿಸಿದ ಈ ರಂಗತಜ್ಞ  ಮಕ್ಕಳಿಗಾಗಿ "ಜೀವನ ಯಾತ್ರೆ " ಎಂಬ ನಾಟಕವನ್ನು ರಮ್ಯಾದ್ಭುತವಾಗಿ ನಿರೂಪಿಸಿ ಮಕ್ಕಳ ನಟನಾ ಕೌಶಲ್ಯವನ್ನು ಹೊರತೆಗೆಯುವಲ್ಲಿ ಸೈ ಎನಿಸಿಕೊಂಡಿದ್ದಾರೆ. ತರಗತಿಯೊಂದರ ಎಲ್ಲಾ  ಮಕ್ಕಳ ಹಾಗೂ ತರಗತಿ ಶಿಕ್ಷಕನ ಅಭಿನಯ  ರಂಗಯಾತ್ರೆಯ ನವ್ಯಾನುಭವಗಳಲ್ಲಿ ಮತ್ತೊಂದು ಮೈಲುಗಲ್ಲಾಗಿ ಈ ನಾಟಕದಲ್ಲಿ ಹೊರ ಹೊಮ್ಮಿದೆ. 

ತರಗತಿ ಅಧ್ಯಾಪಕನ ಪ್ರಮುಖ ಪಾತ್ರದಲ್ಲಿ  ವಸಂತ ಮಾಸ್ಟರ್ ಮೂಡಂಬೈಲು ಅನುಭವಿ ನಟನಾಗಿ ಪಾತ್ರ ನಿರ್ವಹಿಸಿದ್ದರೆ ಇನ್ನುಳಿದಂತೆ ಎಲ್ಲಾ ಮಕ್ಕಳು ತಮ್ಮ ಪಾತ್ರ ವೈಖರಿಗೆ ಜೀವ ತುಂಬಿರುವುದು ಪುಟಾಣಿ ರಂಗ ಪ್ರಪಂಚಕ್ಕೊಂದು ಮಾದರಿಯಾಗಿದೆ. ಕಾಸರಗೋಡಿನ ಮಕ್ಕಳ ಖ್ಯಾತ ರಂಗತಜ್ಞ, ಪೆರ್ಮುದೆ ಶಾಲಾ ಮುಖ್ಯೋಪಾಧ್ಯಾಯ ಸದಾಶಿವ ಬಾಲಮಿತ್ರ ನಿರ್ದೇಶಿಸಿದ ನಾಟಕದಲ್ಲಿ ಸಹ ನಿರ್ದೇಶನದ ಜತೆಗೆ ರಂಗಪರಿಕರ ವ್ಯವಸ್ಥೆಗೂ  ವಸಂತ ಮಾಸ್ಟರ್ ಮೂಡಂಬೈಲು ಕೈ ಜೋಡಿಸಿದ್ದಾರೆ.

ಎಸ್.ಪಿ.ರಾವ್. ಪೈವಳಿಕೆ, ಸನತ್ ಮಾಸ್ಟರ್  ಕಿದೂರು  ಹಾಗೂ ರಂಗ ಚೇತನ ಕಾಸರಗೋಡು ಇದರ ಪದಾಧಿಕಾರಿಗಳು ಸಹಕಾರ ನೀಡಿದ್ದಾರೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಿದೂರು ಇದರ ಮುಖ್ಯ ಶಿಕ್ಷಕಿ ಮತ್ತು ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ವೃಂದ, ಮಕ್ಕಳ ರಂಗಭೂಮಿಗೆ ಪ್ರೋತ್ಸಾಹದಾಯಕರಾಗಿದ್ದಾರೆ.

Post a Comment

0 Comments