ಕುಂಬಳೆ: ಪಂಚಾಯತ್ ವ್ಯಾಪ್ತಿಯ ಕಂಚಿಕಟ್ಟೆ ಪ್ರದೇಶದ ಜನರ ಬಹುಕಾಲದ ಬೇಡಿಕೆಯಾಗಿದ್ದ ರೆಗ್ಯುಲೇಟರ್ ಕಂ ಬ್ರಿಡ್ಜ್ ಪುನರ್ನಿರ್ಮಾಣಕ್ಕೆ ಈಗ ಅಧಿಕೃತ ಚಾಲನೆ ದೊರೆತಿದೆ. ಈ ಬೃಹತ್ ಯೋಜನೆಗಾಗಿ ನಬಾರ್ಡ್ (NABARD) ವತಿಯಿಂದ 27.10 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, ಇದು ಶಾಸಕ ಎ.ಕೆ.ಎಂ ಅಶ್ರಫ್ ಹಾಗೂ ಕ್ರಿಯಾ ಸಮಿತಿ ಸರ್ಕಾರದ ವಿವಿಧ ಮಟ್ಟಗಳಲ್ಲಿ ನಡೆಸಿದ ಸತತ ಪ್ರಯತ್ನಗಳಿಗೆ ಫಲಶ್ರುತಿ ದೊರೆತಿದೆ. ಕಳೆದ 2024ರ ಏಪ್ರಿಲ್‌ನಲ್ಲಿ ಹಳೆಯ ಸೇತುವೆಯು ತೀವ್ರವಾಗಿ ಹಾನಿಗೊಳಗಾದ ಕಾರಣ ಜಿಲ್ಲಾಧಿಕಾರಿಗಳು ಸುರಕ್ಷತೆಯ ದೃಷ್ಟಿಯಿಂದ ಸಂಚಾರವನ್ನು ನಿಷೇಧಿಸಿದ್ದರು. ಇದರಿಂದಾಗಿ ಕಂಚಿಕಟ್ಟೆ, ಮಳಿ, ಕುಂಡಾಪು, ಕೆಳಗಿನ ಕೊಡಿಯಮ್ಮ,ಛತ್ರಪಳ್ಳಂ, ಚೂರಿತ್ತಡ್ಕ,ಊಜಾರು ಭಾಗದ ವಿದ್ಯಾರ್ಥಿಗಳು, ಕೃಷಿಕರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಮನಗಂಡ ಶಾಸಕರು, ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಯೋಜನೆಯ ಅನಿವಾರ್ಯತೆಯನ್ನು ವಿವರಿಸಿದ್ದರು. ಅಲ್ಲದೆ, ನಬಾರ್ಡ್ ಅಧಿಕಾರಿಗಳ ತಂಡವು ಜನವರಿ 29 ರಂದು ಸ್ಥಳಕ್ಕೆ ಭೇಟಿ ನೀಡಿ ತಾಂತ್ರಿಕ ಪರಿಶೀಲನೆ ನಡೆಸುವಂತೆ ಮಾಡುವಲ್ಲಿ ಶಾಸಕರು ಪ್ರಮುಖ ಪಾತ್ರ ವಹಿಸಿದ್ದರು.
ಈ ಯೋಜನೆಯ ತಾಂತ್ರಿಕ ವಿವರಗಳ ಕುರಿತು ಮಾಹಿತಿ ನೀಡಿರುವ ಶಾಸಕರು, ಹೊಸದಾಗಿ ನಿರ್ಮಾಣವಾಗಲಿರುವ ಸೇತುವೆಯು 70 ಮೀಟರ್ ಉದ್ದ ಹಾಗೂ 6.7 ಮೀಟರ್ ಅಗಲವನ್ನು ಹೊಂದಿರಲಿದ್ದು, ಎರಡು ವಾಹನಗಳು ಏಕಕಾಲದಲ್ಲಿ ಸಂಚರಿಸಲು ಸುಸಜ್ಜಿತವಾಗಿರಲಿದೆ ಎಂದು ತಿಳಿಸಿದ್ದಾರೆ. ಈ ಭಾಗದ ಸುಮಾರು 800 ಹೆಕ್ಟೇರ್ ಕೃಷಿ ಭೂಮಿಗೆ ಸಮುದ್ರದ ಉಪ್ಪು ನೀರು ನುಗ್ಗದಂತೆ ತಡೆಯಲು 2.5 ಮೀಟರ್ ಎತ್ತರದವರೆಗೆ ನೀರು ಸಂಗ್ರಹಿಸುವ ಸಾಮರ್ಥ್ಯದ ರೆಗ್ಯುಲೇಟರ್ ಅನ್ನು ಈ ಯೋಜನೆಯಲ್ಲಿ ಅಳವಡಿಸಲಾಗಿದೆ. ಇದರ ಜೊತೆಗೆ 60 ಮೀಟರ್ ಉದ್ದದ ಬಿ.ಎಂ ಮತ್ತು ಬಿ.ಸಿ ಗುಣಮಟ್ಟದ ಅಪ್ರೋಚ್ ರಸ್ತೆ, ನದಿಯಲ್ಲಿ ಹೂಳೆತ್ತುವಿಕೆ ಹಾಗೂ ನದಿ ತೀರದ ಸಂರಕ್ಷಣೆಗಾಗಿ ಪಾರ್ಶ್ವಗೋಡೆಗಳ ನಿರ್ಮಾಣವನ್ನು ಈ ಯೋಜನೆಯಲ್ಲಿ ಸೇರಿಸಲಾಗಿದೆ. ಊರವರು ಹಾಗೂ ಕ್ರಿಯಾಸಮಿತಿ ನೇತೃತ್ವದಲ್ಲಿ ಈಗಾಗಲೇ ಧನಸಂಗ್ರಹ ಮೂಲಕ ಖಾಸಗಿ ಭೂಮಿಯನ್ನು ಖರೀದಿಸಿದ್ದಾರೆ. ಇದೀಗ ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

0 Comments