Ticker

6/recent/ticker-posts

Ad Code

ಮನಸ್ಸು ಅರಳಿಸುವುದು ಸಾಹಿತ್ಯ : ‘ಭಕ್ತಿಕುಸುಮಾಂಜಲಿ' ಬಿಡುಗಡೆಗೊಳಿಸಿ ಪ್ರೊ. ವಿ. ಬಿ. ಅರ್ತಿಕಜೆ

 

ವಿಟ್ಲ : 'ಸಾಹಿತ್ಯವು ಓದುಗರ ವಿಚಾರಗಳನ್ನು ಪ್ರಚೋದಿಸಿ ಮನಸ್ಸನ್ನು ಅರಳಿಸುತ್ತದೆ, ವ್ಯಕ್ತಿತ್ವವನ್ನು ಸುಸಂಸ್ಕೃತಗೊಳಿಸುತ್ತದೆ' ಎಂದು ಪುತ್ತೂರಿನ ಅಂಕಣಕಾರ ಮತ್ತು ನಿವೃತ್ತ ಪ್ರೊಫೆಸರ್ ಪ್ರೊ. ವಿ. ಬಿ. ಅರ್ತಿಕಜೆ ಹೇಳಿದರು. ವಿಟ್ಲ ಸಮೀಪದ ಮಂಗಲಪದವಿನಲ್ಲಿ ಕವಯತ್ರಿ ವೆಂಕಟೇಶ್ವರಿ ಕೃಷ್ಣಭಟ್ ಪುದುಕೋಳಿ ಅವರು ರಚಿಸಿದ ಭಕ್ತಿಗೀತೆಗಳ ಸಂಕಲನ 'ಭಕ್ತಿಕುಸುಮಾಂಜಲಿ' ಬಿಡುಗಡೆಗೊಳಿಸಿ ಅವರು ಮಾತಾನಾಡುತ್ತಿದ್ದರು.  ನಿವೃತ್ತ ಅಧ್ಯಾಪಕ ಜಿ. ಪಿ. ವೆಂಕಟರಾವ್ ವಾದ್ಯಕೋಡಿ, ಕೃಷ್ಣಭಟ್ ಪುದುಕೋಳಿ ಮತ್ತು ರಾಮಚಂದ್ರ ಭಟ್ ಮಂಗಲಪದವು ಮುಖ್ಯ ಅತಿಥಿಗಳಾಗಿದ್ದರು.

ಸಾಹಿತಿ ಮತ್ತು ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ  'ಇತ್ತೀಚಿನ ದಿನಗಳಲ್ಲಿ ಭಕ್ತಿ ಸಾಹಿತ್ಯ ಎಂಬುದು ಕಣ್ಮರೆಯಾಗುತ್ತಿದೆ. ಭಾರತದಲ್ಲಿ, ಅದರಲ್ಲೂ ಕನ್ನಡದಲ್ಲಿ ಭಕ್ತಿ ಸಾಹಿತ್ಯಕ್ಕೆ ಬಹು ದೊಡ್ಡ ಪರಂಪರೆ ಇದೆ. ಭಜನಾ ತಂಡಗಳಿಗೆ ಮತ್ತು ನೃತ್ಯಭಜನೆ ಮಾಡುವವರಿಗೆ ಇಂತಹ ಭಕ್ತಿಗೀತೆಗಳ ಅಗತ್ಯ ತುಂಬ ಇದೆ. ಆರುನೂರಕ್ಕಿಂತ ಹೆಚ್ಚು ಭಕ್ತಿಗೀತೆಗಳನ್ನು ರಚಿಸಿರುವ  ವೆಂಕಟೇಶ್ವರಿ ಕೃಷ್ಣಭಟ್ ಅವರ ಸಾಧನೆ ದೊಡ್ಡದು' ಎಂದರು. ಎಲೆಮರೆಯ ಕಾಯಿಗಳಂತೆ ಗ್ರಾಮಾಂತರ ಪ್ರದೇಶಗಳಲ್ಲಿ ನೆಲೆಸಿರುವ ಲೇಖಕರನ್ನು ಮತ್ತು ಕವಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯ ಇದೆ. ಇಂದಿನ ಸಾಹಿತ್ಯದಲ್ಲಿ ಗ್ರಾಮೀಣ ಬದುಕಿನ ಸೊಗಡು ಕಡಿಮೆಯಾಗುತ್ತಿದ್ದು ಅದಕ್ಕೆ ಉತ್ತೇಜನ ನೀಡಬೇಕಾಗಿದೆ ಎಂದು ಡಾ. ಪೆರ್ಲ ಅವರು ಹೇಳಿದರು.  

ಕವಯತ್ರಿ ವೆಂಕಟೇಶ್ವರಿ ಕೃಷ್ಣಭಟ್ ತನ್ನ ಸಾಹಿತ್ಯ ರಚನೆಯ ಹಿಂದಿನ ಪ್ರೇರಣೆಗಳ ಕುರಿತು ಮಾತಾನಾಡಿದರು. ಅಶ್ವಿನಿ ಭರತ್ ಕೋಡ್ಲ ಪುಸ್ತಕದಿಂದ ಆಯ್ದ ಗೀತೆಗಳನ್ನು ಹಾಡಿದರು. ಸೀಮಾ ಗಣೇಶಚಂದ್ರ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಮಾರಿಯರಾದ ಸಮೃದ್ಧಿ ಎಸ್. ಭಟ್ ಮತ್ತು ಶ್ರೀಸ್ಮೃತಿ ಎಲ್. ಪಿ. ಪ್ರಾರ್ಥನೆ ಹಾಡಿದರು. ಅಧ್ಯಾಪಕರಾದ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿ, ಲಕ್ಷ್ಮೀಶ ಪುದುಕೋಳಿ ವಂದಿಸಿದರು.

Post a Comment

0 Comments