ಪೆರ್ಲ: ಹಿರಿಯ ಕಾಂಗ್ರೆಸ್ ನಾಯಕ, ನಲ್ಕ ವಾಗ್ದೇವಿ ಅನುದಾನಿತ ಪ್ರಾಥಮಿಕ ಶಾಲೆಯ ನಿಕಟಪೂರ್ವ ವ್ಯವಸ್ಥಾಪಕ ಶ್ರೀಕೃಷ್ಣ ಭಟ್ ವರ್ಮುಡಿ(78) ಗುರುವಾರ ನಿಧನರಾದರು.
ಎಣ್ಮಕಜೆ ಮಂಡಲ ಕಾಂಗ್ರೆಸ್ ಸಮಿತಿಯ ಕೋಶಾಧಿಕಾರಿಯಾಗಿ ಹಾಗೂ ಯುಡಿಎಫ್ ಚುನಾವಣಾ ಸಮಿತಿಯ ಪದಾಧಿಕಾರಿಯಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಅವರು ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲಾ ಅವರ ಕಾಲಘಟ್ಟದಿಂದಲೇ ಸಕ್ರಿಯವಾಗಿ ದುಡಿದು ಸಂಘಟನಾ ಶಕ್ತಿಯಾಗಿ ಹೊರಹೊಮ್ಮಿದ್ದರು. ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಅವರು ನೀಡಿದ ಕೊಡುಗೆ ಅನನ್ಯ ಹಾಗೂ ಚಾರಿತ್ರಿಕವಾದುದು. ವಯೋಸಹಜ ಕಾರಣಗಳಿಂದಾಗಿ ಸಕ್ರಿಯ ರಾಜಕಾರಣದಿಂದ ದೂರವಿದ್ದಾಗಲೂ ಪಕ್ಷಕ್ಕೆ ಹಾಗೂ ಐಕ್ಯ ಪ್ರಜಾಪ್ರಭುತ್ವ ರಂಗಕ್ಕೆ ಮಾರ್ಗದರ್ಶನ ನೀಡುತ್ತಾ, ಹಲವು ಸಂದರ್ಭಗಳಲ್ಲಿ ಆರ್ಥಿಕವಾಗಿ ಮತ್ತು ನೈತಿಕವಾಗಿ ಬೆಂಬಲವಾಗಿ ನಿಂತವರ ಅಗಲುವಿಕೆ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಎಣ್ಮಕಜೆ ಮಂಡಲ ಕಾಂಗ್ರೆಸ್ ಸಮಿತಿ ಸಂತಾಪ ವ್ಯಕ್ತಪಡಿಸಿದೆ. ಮೃತರು ಪತ್ನಿ, ಮೂವರು ಪುತ್ರರು, ಪುತ್ರಿಯನ್ನಗಲಿದ್ದಾರೆ.

0 Comments