ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಶೇ.94.10 ರಷ್ಟು ಫಲಿತಾಂಶ ಪ್ರಕಟವಾಗಿದೆ. ಈಗಾಗಲೇ ಇಲಾಖೆ ವೆಬ್ ಸೈಟ್ ನಲ್ಲೂ (web: https://karresults.nic.in/) ಪರೀಕ್ಷಾ ಮಂಡಳಿ ಫಲಿತಾಂಶ ಪ್ರಕಟ ಮಾಡಿದೆ. ಎಸ್ ಎಂ ಎಸ್, ವಾಟ್ಸಪ್ ಮೂಲಕವೂ ಫಲಿತಾಂಶ ಕಳುಹಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಈ ಬಾರಿ ಪರೀಕ್ಷೆ ಬರೆದ ಶೇಕಡಾ 94.1 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 7.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದು, 5 ಸಾವಿರ ವಿದ್ಯಾರ್ಥಿಗಳು ಗೈರಾಗಿದ್ದರು. 7.7 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕೆ ಶೇಕಡಾ 80 ರಷ್ಟು ಫಲಿತಾಂಶ ಬಂದಿದ್ದು, ಈ ಬಾರಿ ಶೇಕಡಾ 14 ರಷ್ಟು ಹೆಚ್ಚಳವಾಗಿರುವುದು ದೊಡ್ಡ ಸಾಧನೆಯಾಗಿದೆ ಎಂದು ಸಚಿವರು ತಿಳಿಸಿದರು. ಈ ಬಾರಿ ಫಲಿತಾಂಶ ಶೇಕಡಾವಾರು ಹೆಚ್ಚಳವಾಗುವ ನಿರೀಕ್ಷೆ ಇತ್ತು. ಅದಕ್ಕಾಗಿ ಶಿಕ್ಷಣ ಇಲಾಖೆ ಜಿಲ್ಲಾಮಟ್ಟದಲ್ಲೇ ಸಾಕಷ್ಟು ಪ್ರಯತ್ನಗಳನ್ನು ಮಾಡಿತ್ತು. ಅದರಂತೆ ಐತಿಹಾಸಿಕ ಫಲಿತಾಂಶ ಲಭಿಸಿದೆ. 7,70,209 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 7,26,704 ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ.
ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಪ್ರಥಮ ಸ್ಥಾನ, ಉಡುಪಿ ದ್ವಿತೀಯ ಸ್ಥಾನ ಹಾಗೂ ಉತ್ತರ ಕನ್ನಡ 3ನೇ ಸ್ಥಾನ ಪಡೆದುಕೊಂಡಿದೆ. ಕಲಬುರಗಿ ಕೊನೆಯ ಸ್ಥಾನದಲ್ಲಿದೆ. ಈ ಬಾರಿ ಪರೀಕ್ಷೆಯಲ್ಲಿ ಏಳು ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಗಳಿಸಿದ್ದಾರೆ. ದಾವಣಗೆರೆಯ ಭರತ್, ರಾಯಚೂರಿನ ಸುಖದೇವ್, ಚಿಕ್ಕೋಡಿಯ ಪ್ರಾರ್ಥನಾ, ಚಿಕ್ಕಮಗಳೂರಿನ ಬೃಂದಾ, ಉಡುಪಿ ಪ್ರೀತಂ, ವಿಜಯಪುರದ ಸೌಜನ್ಯ, ಬೆಂಗಳೂರು ಉತ್ತರ ಧನುಷ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

0 Comments