ಉಡುಪಿ : ಮಣಿಪಾಲದ ಶಾಂತಿನಗರದ ಬಳಿಯ ರೂಮಿನಲ್ಲಿ ಅಂಕೋಲದ ಯೋಗೀತಾ (23) ಎಂಬಾಕೆಯ ಕೊಲೆಗೆ ಯತ್ನಿಸಿ ಚಿನ್ನಾಭರಣ ಕಳವು ಮಾಡಿರುವ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಯೋಗೀತಾಳ ಪಕ್ಕದ ರೂಮಿನಲ್ಲಿಯೇ ವಾಸವಾಗಿದ್ದ ಸ್ನೇಹಿತೆಯನ್ನೇ ಬಂಧಿಸಿದ್ದಾರೆ.
ಅಂಕೋಲಾ ತಾಲೂಕಿನ ಖೇಣಿ ಬಾವಿಕೇರಿ ಗ್ರಾಮದ ಸುಷ್ಮಾ ಅಣ್ಣಪ್ಪ ನಾಯ್ಕ(31) ಬಂಧಿತ ಆರೋಪಿ. ಯೋಗೀತಾ ತನ್ನ ಇಬ್ಬರು ಗೆಳತಿಯರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಅವರಿಬ್ಬರು ಮೇ 12ರಂದು ಸಂಜೆ ರಾತ್ರಿ ಪಾಳಿ ಕೆಲಸಕ್ಕೆ ಹೋಗಿದ್ದರು. ಇವರು ಕೆಲಸ ಮುಗಿಸಿ ಬುಧವಾರ ಬೆಳಗ್ಗೆ ರೂಮಿಗೆ ಬಂದು ನೋಡಿದಾಗ ಯೋಗೀತಾ ಗಂಭೀರವಾಗಿ ಗಾಯಗೊಂಡು ಬಿದ್ದಿರುವುದು ಕಂಡುಬಂದಿದೆ. ಯೋಗೀತಾಳನ್ನು ಅಪರಿಚಿತರು ಬಂಗಾರದ ಸರವನ್ನು ಅಪಹರಿಸಿ, ಬಳಿಕ ಆಕೆಯ ತಲೆಗೆ ಸಿಂಮೆಂಟ್ ಕಲ್ಲಿನಿಂದ ಹೊಡೆದು ಕೊಲೆ ಯತ್ನಿಸಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದರಂತೆ ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಲಾಯಿತು. ಸ್ಥಳದ ಸುತ್ತಲಿನ ಸಿಸಿಟಿವಿಗಳನ್ನು ಪರಿಶೀಲನೆ ಮತ್ತು ಸುತ್ತಲಿನ ಸಂಶಯಿತ ವ್ಯಕ್ತಿಗಳನ್ನು ವಿಚಾರಿಸಲಾಯಿತು. ಕೊನೆಗೆ ಪೊಲೀಸರು ಸಂಶಯಗೊಂಡು ಯೋಗೀತಾಳ ರೂಮಿನ ಪಕ್ಕದ ರೂಮಿನಲ್ಲಿ ವಾಸವಾಗಿದ್ದ ಯೋಗೀತಾಳ ಸ್ನೇಹಿತೆ ಸುಷ್ಮಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಈ ವೇಳೆಯಲ್ಲಿ ಆರೋಪಿತೆ ಈ ಕೃತ್ಯ ಎಸಗಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಆರೋಪಿ ಸುಷ್ಮಾಗೆ ತೀರಾ ಹಣಕಾಸಿನ ತೊಂದರೆ ಇದ್ದು ಹಾಗೂ ಆಕೆಯ ಮನೆಯವರು ಆಗಾಗ ಹಣಕ್ಕಾಗಿ ಪೀಡಿಸುತ್ತಿದ್ದರು. ಆಕೆ ದುಡಿದ ಹಣವು ಆಕೆಯ ಖರ್ಚಿಗೆ ಸರಿ ಹೋಗುತ್ತಿರುವುದರಿಂದ ಕಳೆದ 3 ವರ್ಷಗಳಿಂದ ಮನೆಗೆ ಹಣ ಕಳುಹಿಸಕೊಡಲು ಸಾಧ್ಯವಾಗಿಲ್ಲ. ಅದಕ್ಕಾಗಿ ಆಕೆಯ ಮನೆಯವರು ಕೆಲಸ ಬಿಟ್ಟು ವಾಪಾಸ್ಸು ಊರಿಗೆ ಬರುವಂತೆ ಪೀಡಿಸುತ್ತಿದ್ದರು. ಮನೆಗೆ ಕಳುಹಿಸಲು ಹಣವನ್ನು ಹೊಂದಿಸುವ ಅನಿವಾರ್ಯತೆಯಿಂದ ಸುಷ್ಮಾ ತನ್ನ ಗೆಳತಿ ಯೋಗಿತಾಳ ಕೊರಳಿನಲ್ಲಿದ್ದ ಚಿನ್ನದ ಸರ ಹಾಗೂ ಕಿವಿಯಲ್ಲಿದ್ದ ಬೆಂಡೋಲೆಗಳನ್ನು ಅಪಹರಿಸಲು ನಿರ್ಧರಿಸಿದ್ದಳು. ಅದಕ್ಕಾಗಿ ಆಕೆ ಮೇ 12ರಂದು ರಾತ್ರಿ 9:30ರ ಸುಮಾರಿಗೆ ಯೋಗೀತಾಳ ರೂಮಿನಲ್ಲಿ ಆಕೆಯ ಜೊತೆ ಮಲಗಿ ಈ ಕೃತ್ಯ ಎಸಗಿದ್ದಳೆಂದು ತಿಳಿಸಿದ್ದಾಳೆ .

0 Comments