Ticker

6/recent/ticker-posts

Ad Code

ಮೇ 24ಕ್ಕೆ ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಪ್ಲಾಟಿನಂ ಜುಬಿಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ

 

ಕಾಸರಗೋಡು : ಏಳೂವರೆ ದಶಕಗಳ ಹಿರಿಮೆಯೊಂದಿಗೆ ನಿಂತಿರುವ ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಒಂದು ವರ್ಷದ ಪ್ಲಾಟಿನಂ ಜುಬಿಲಿ ಆಚರಣೆಗಳ ಅಂಗವಾಗಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಮೇ 24 ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದೆ. ಶಾಲೆಯ ಹಳೆವಿದ್ಯಾರ್ಥಿಯಾಗಿರುವ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎ. ಶಂಕರನ್ ನಾಯರ್ ಕಾರ್ಯಕ್ರಮವನ್ನು ಉದ್ಘಾಟಿಸುವರು.

 1952ರಲ್ಲಿ ಸಣ್ಣಯ್ಯ ಮಾಸ್ತರು ಆರಂಭಿಸಿದ ಈ ವಿದ್ಯಾಸಂಸ್ಥೆಯು ಇಂದು ಮಲೆನಾಡು ಪ್ರದೇಶದ ಜ್ಞಾನಜ್ಯೋತಿಯಾಗಿ ಬೆಳಗುತ್ತಿದೆ. ಮೂರು ತಲೆಮಾರಿನ ಜ್ಞಾನಪರಂಪರೆಯನ್ನು ಮುಂದುವರಿಸಲು ಸಾಧ್ಯವಾದ ಈ ಶಾಲೆಯ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ.

ಆರಂಭದಲ್ಲಿ ಕೇವಲ ಕನ್ನಡ ಮಾಧ್ಯಮವಿದ್ದ ಈ ಶಾಲೆಯು, 1956ರ ಕೇರಳ ರಾಜ್ಯೋತ್ಸವದ ನಂತರ ಮಲಯಾಳಂ ವಿಭಾಗಗಳನ್ನೂ ಒಳಗೊಂಡ ಎಲ್.ಪಿ. ಶಾಲೆಯಾಯಿತು. ನಂತರ ಅಪ್ಪರ್ ಪ್ರೈಮರಿ, ಹೈ ಸ್ಕೂಲ್, ಹೈಯರ್ ಸೆಕೆಂಡರಿ, ಪ್ರೀ-ಪೈಮರಿ ಮುಂತಾದ ವಿವಿಧ ಘಟಕಗಳು ಆರಂಭಗೊಂಡವು. -2 ರಿಂದ +2ರವರೆಗೆ ಒಂದೇ ಗೂಡಿನಡಿಯಲ್ಲಿ ಮೂರು ಭಾಷೆಗಳಲ್ಲಿ ಶಿಕ್ಷಣ ನಡೆಯುತ್ತಿರುವ ಈ ವಿದ್ಯಾಸಂಸ್ಥೆಯಿಂದ, ಪ್ರತಿವರ್ಷ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರ್ಣಗೊಳಿಸುತ್ತಿದ್ದಾರೆ. ಪ್ರಸ್ತುತ ಸುಮಾರು 1200 ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಶೈಕ್ಷಣಿಕ ಹಾಗೂ ಪಠ್ಯೇತರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗಳನ್ನು ಮಾಡಿರುವ ಈ ಶಾಲೆಯು ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ.

ಶಾಲೆಯ ಆರಂಭದಿಂದಲೂ ಇಂದಿನವರೆಗೆ ಶಾಲೆಯ ಚಟುವಟಿಕೆಗಳಲ್ಲಿ ಹೆಗಲಿಗೆ ಹೆಗಲು ಸೇರಿಸಿ ನಿಂತವರು ಇಲ್ಲಿನ ಜನರು. ಕುಟ್ಟಿಕೋಲ್ ಪಂಚಾಯತ್‌ನ ಬಹುಪಾಲು ಜನರು ಈ ಶಾಲೆಯ ಹಳೆ ವಿದ್ಯಾರ್ಥಿಗಳೇ ಆಗಿದ್ದಾರೆ. ಮುಂದೆಯೂ ಶಾಲೆಯೊಂದಿಗಿನ ಸಂಬಂಧ ಸಹಕಾರ ಮುಂದುವರಿಯಲಿ ಎಂದು ಈ ಸಮ್ಮಿಲನ ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Post a Comment

0 Comments