ಕಾಸರಗೋಡು : ಶ್ರೀ ಕ್ಷೇತ್ರ ಕಾಳ್ಯಂಗಾಡು ಬ್ರಹ್ಮಕಲಶೋತ್ಸವ ವೈಶಿಷ್ಠ್ಯದ ಜೊತೆಗೆ ಅನೇಕ ವಿಭಿನ್ನತೆಗೂ ಭೂಮಿಕೆಯಾಗಿದೆ. ಇಲ್ಲಿನ ಸರಸ್ವತಿ ಮಂಟಪದಲ್ಲಿ ನಡೆಯುತ್ತಿರುವ ಸರಣಿ ಭಜನೆ ಕಾರ್ಯಕ್ರಮ ತನ್ನದೇ ಪ್ರೇಕ್ಷಕ ವೃಂದವನ್ನು ಹೊಂದಿದೆ. ವಿಭಿನ್ನ ತಂಡಗಳು ಇಲ್ಲಿ ಸತತವಾಗಿ ಸಂಕೀರ್ತನೆ ನಡೆಸಿಕೊಡುತ್ತಿದ್ದಾರೆ. ಇದೆಲ್ಲವನ್ನೂ ಮೀರಿ ಸ್ಥಳೀಯ ಸಾಕುನಾಯಿಯೊಂದು ಶ್ರದ್ಧೆಯಿಂದ ಪ್ರತಿ ಭಜನೆಯನ್ನು ಆಲಿಸುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಹಾಡುಗಳು ಮನಜಕುಲಕ್ಕೆ ಮಾತ್ರವಲ್ಲ, ಸಕಲ ಜೀವರಾಶಿಗಳಿಗೂ ಮೋಡಿ ಮಾಡುವ ವಿದಾನ ಎಂಬುದನ್ನು ನಮ್ಮ ಸನಾತನ ಸಂಸ್ಕೃತಿ ತಿಳಿಸಿಕೊಡುತ್ತದೆ. ಶ್ರೀಕೃಷ್ಣ ಪರಮಾತ್ಮ ಕೊಳಲ ಗಾಯನ ಮಾಡಿದಾಗ ಗೋವುಗಳೆಲ್ಲ ಮಂತ್ರಮುಗ್ಧವಾಗುತ್ತಿದ್ದುದನ್ನು ನಾವು ಕಥಾನಕಗಳಲ್ಲಿ ಕೇಳಿದ್ದೇವೆ. ನಾರದ, ತುಂಬುರರು ಹಾಡಿದಾಗ ಪ್ರಕೃತಿಯೇ ಮೋಡಿಗೊಳಗಾಗುತ್ತಿದ್ದ ವರ್ಣನೆಯನ್ನು ಆಲಿಸಿದ್ಧೇವೆ. ಆಂಜನೇಯ ಹಾಡಿದರೆ ಸಾಕ್ಷಾತ್ ಶ್ರೀರಾಮನೇ ಎದ್ದು ಬರುತ್ತಿದ್ದನಂತೆ. ತುಳಸೀದಾಸರು ರಾಮಭಜನೆ ಮಾಡಿದಾಗ ಹನುಮನೇ ಮಾರುವೇಷದಲ್ಲಿ ಕುಳಿತು ಕೇಳುತ್ತಿದ್ದನಂತೆ.......
ಆದರೆ ಇಷ್ಟ ಬದ್ಧತೆಯಿಂದ ಭಜನೆಗಳನ್ನು ಆಲಿಸುವ ನಾಯಿಯೊಂದರ ಆಸಕ್ತಿ ಬಹಳ ವಿರಳ. ಶ್ರೀ ಕ್ಷೇತ್ರ ಕಾಳ್ಯಂಗಾಡು ಭಜನೆ, ಸಂಕೀರ್ತನೆಗಳಿಗೂ ತುಂಬ ಮಹತ್ವ ನೀಡುವ ತಾಣ. ಬಹುಶಃ ತನ್ನ ಪುಟ್ಟ ವಯಸ್ಸಿನಲ್ಲೇ ಭಕುತಿಯ ಹಾಡುಗಳನ್ನು ಕೇಳುತ್ತಾ ಬೆಳೆದ ಈ ನಾಯಿ ಈ ಬಗೆಗಿನ ಆಸಕ್ತಿಯನ್ನು ಜೀವನದುದ್ದಕ್ಕೂ ಉಳಿಸಿಕೊಂಡಿದೆ. ಪ್ರೇಕ್ಷಕ ವೃಂದದ ಸಾಲಿನ ಮಂದಿಯ ಕಾಲಬುಡದಲ್ಲಿ ಕುಳಿತು ಯಾರಿಗೂ ತೊಂದರೆ ನೀಡದೆ ಸುಮ್ಮನೆ ಭಗವಂತನ ಹಾಡುಗಳನ್ನು ಕೇಳುತ್ತಾ ಕಾಲಕಳೆಯುವ ನಾಯಿ ಸಾಮಾನ್ಯವಲ್ಲ.
ಬರಹ : ವೀಜಿ. ಕಾಸರಗೋಡು (ಹಿರಿಯ ಪತ್ರಕರ್ತರು)
ಚಿತ್ರ: ವಸಂತ್ ಕೆರೆಮನೆ

0 Comments