ಪಾವೂರು : ಪಾವೂರು ಅಂಗನವಾಡಿ ಕೇಂದ್ರದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರು, ಪುಟಾಣಿ ಮಕ್ಕಳು, ಪೋಷಕರು ಹಾಗೂ ಸ್ಥಳೀಯ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಅಬೂಬಕ್ಕರ್ ಸಿದ್ದಿಕ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ವರ್ಕಾಡಿ ಪಂಚಾಯತ್ ಅಧ್ಯಕ್ಷ ಪುತ್ತು ಚಾ, ಸ್ವಾತಂತ್ರ್ಯೋತ್ಸವವನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ದೇಶಪ್ರೇಮ ಹಾಗೂ ಮೌಲ್ಯಗಳನ್ನು ಇಂದಿನ ಮಕ್ಕಳಿಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು. ಸ್ವಾತಂತ್ರ್ಯದ ಮಹತ್ವವನ್ನು ಬಾಲ್ಯದಿಂದಲೇ ಮಕ್ಕಳಲ್ಲಿ ಬೆಳೆಸಬೇಕು ಎಂದು ಕರೆ ನೀಡಿದರು.
ತೀಯಾ ಸಮಿತಿ ಅಧ್ಯಕ್ಷ ಗಣೇಶ್ ಪಾವೂರು, ಮಂಜೇಶ್ವರ ಬ್ಲಾಕ್ ಸದಸ್ಯೆ ಎಸ್.ಎ.ಬಿ. ಫಾತಿಮ್ಮ ಮಾತನಾಡಿದರು. ಸಾಮಾಜಿಕ ಸೇವಕ ಬದ್ರುದ್ದೀನ್ ಪಾವೂರು, ಆನ್ಸರ್ ಕುಂಡಪು, ಇಸ್ಮಾಯಿಲ್ ಕುಂಡಪು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಶೈಲಜಾ ಸ್ವಾಗತಿಸಿದರು.
ರಾಷ್ಟ್ರಧ್ವಜ ಹಾಗೂ ದೇಶಭಕ್ತಿ ಬಿಂಬಿಸುವ ವೇಷಭೂಷಣಗಳಲ್ಲಿ ಅಂಗನವಾಡಿ ಮಕ್ಕಳು ಭಾಗವಹಿಸಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಮಕ್ಕಳು, ಮಹಿಳೆಯರು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾತಂತ್ರ್ಯೋತ್ಸವದ ಸಂಭ್ರಮ ಹೆಚ್ಚಿಸಿದರು.

0 Comments