ಕಾಸರಗೋಡು : ಆದೂರು ಗ್ರಾಮದ ಏಳ್ನಾಡು ಗುತ್ತು ಮಾರ್ಗತ್ತಾಣದಲ್ಲಿರುವ ಕಲ್ಲುರ್ಟಿ–ಕಲ್ಕುಡ ದೈವಸ್ಥಾನದಲ್ಲಿ ಆಷಾಢ ಮಾಸದಲ್ಲಿ ದಿನಂಪ್ರತಿ ನಡೆದುಕೊಂಡು ಬರುತ್ತಿದ್ದ ಶ್ರೀದೈವಗಳ ಕೋಲ ಮತ್ತು ಅಗೇಲು ಸಮರ್ಪಣೆ ಈ ಬಾರಿ ಆಗೋಸ್ತು 16 ರವಿವಾರ ನಡೆಯಲಿದೆ. ತುಳುನಾಡಿನ ದೈವಾರಾಧನಾ ಪರಂಪರೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದ ಏಳ್ನಾಡು ಗುತ್ತು ಮಾರ್ಗತ್ತಾಣ ದೈವಸ್ಥಾನದಲ್ಲಿ ಆಟಿ ತಿಂಗಳಲ್ಲಿಯೂ ಇಲ್ಲಿ ಕಲ್ಲುರ್ಟಿ–ಕಲ್ಕುಡ ದೈವಗಳ ಕೋಲಗಳು ಸಂಪ್ರದಾಯಬದ್ಧವಾಗಿ ನಡೆಯುತ್ತಲೇ ಇರುತ್ತವೆ. ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಈ ದೈವಾರಾಧನಾ ಪರಂಪರೆ ಇಂದಿಗೂ ಯಾವುದೇ ವ್ಯತ್ಯಯವಿಲ್ಲದೆ ಮುಂದುವರಿದಿರುವುದು ಈ ಕ್ಷೇತ್ರದ ಸವಿಶೇಷತೆಯಾಗಿದೆ.
ಆಟಿ ತಿಂಗಳು ಆರಂಭವಾಗುತ್ತಿದ್ದಂತೆ ದೈವಸ್ಥಾನದ ವಾತಾವರಣವೇ ಬದಲಾಗುತ್ತದೆ. ಭಕ್ತರ ಸಂಚಾರ, ಹರಕೆ–ಸೇವೆಗಳು ಮತ್ತು ದೈವದ ಕೋಲಗಳ ಮೂಲಕ ದೈವಸ್ಥಾನದಲ್ಲಿ ವಿಶಿಷ್ಟವಾದ ಧಾರ್ಮಿಕ ವಾತಾವರಣ ನಿರ್ಮಾಣವಾಗುತ್ತದೆ. ಆದೂರು ಕೇರಳದ ಗಡಿ ಪ್ರದೇಶದಲ್ಲಿರುವುದರಿಂದ ಈ ದೈವಸ್ಥಾನವು ಕೇವಲ ಸ್ಥಳೀಯ ಭಕ್ತರ ಆರಾಧನಾ ಕೇಂದ್ರವಾಗಿರದೆ, ಕರ್ನಾಟಕ–ಕೇರಳದ ಗಡಿಯಾಚೆಗಿನ ತುಳುನಾಡಿನ ಸಾಂಸ್ಕೃತಿಕ ಸಂಬಂಧದ ಒಂದು ಪ್ರಮುಖ ಕೊಂಡಿಯಂತಿದೆ.
ಆಟಿಯ ವಿಶೇಷ ಸಂದರ್ಭದಲ್ಲಿ ನೆರೆಯ ಕರ್ನಾಟಕದ ಪುತ್ತೂರು, ಸುಳ್ಯ, ವಿಟ್ಲ, ಮಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಅಷ್ಟೇ ಅಲ್ಲದೆ ಕೊಡಗು ಭಾಗದಿಂದಲೂ ಭಕ್ತರು ಬಂದು ತಮ್ಮ ಹರಕೆ ಹಾಗೂ ಸೇವೆಗಳನ್ನು ಸಲ್ಲಿಸುತ್ತಾರೆ.
ಈ ವರ್ಷದ ಆಟಿ ತಿಂಗಳ ಕೊನೆಯ ದೈವಕೋಲ ಆ.16ರಂದು ಆದಿತ್ಯವಾರ ಜರಗಲಿದೆ. ಸೋಮವಾರ ದಿವಸ ದೈವ ಅಗೇಲು ಬಾರಣೆ ಸ್ವೀಕರಿಸುವುದಿಲ್ಲ ಎಂಬ ಸಂಪ್ರದಾಯದಂಗವಾಗಿ ಈ ಬಾರಿ ಸಂಕ್ರಮಣ ಸೋಮವಾರವಾಗಿದ್ದರೂ ಇಲ್ಲಿ ಮಾತ್ರ ರವಿವಾರ ನಡೆಸಲಾಗುತ್ತಿದೆ. ಶ್ರೀದೈವಕ್ಕೆ ಅಗೇಲು ಸಮರ್ಪಣೆ ವಿಶೇಷ ಸೇವೆಯಾಗಿದ್ದು 700 ರೂ. ಹಾಗೂ ಕೋಳಿ, ತೆಂಗಿನಕಾಯಿ ತಂದೊಪ್ಪಿಸಿದವರಿಗೆ ರೂ.250 ನೀಡಬೇಕಾಗಿದೆ. ಆ.16 ಕೋಲದ ದಿನ ಸೇರಿದ ಭಕ್ತರಿಗೆ ಕಡುಬು ಪ್ರಸಾದ ರೂಪದಲ್ಲಿ ವಿತರಣೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗೆ 9740768208 ಅಥವಾ 9074371199 ನಂಬ್ರದಲ್ಲಿ ಸಂಪರ್ಕಿಸುವಂತೆ ಸಂಬಂಧಪಟ್ಟವರು ತಿಳಿಸಿದ್ದಾರೆ.

0 Comments