ಕಾಸರಗೋಡು : ಜಿಲ್ಲೆಯ ಪುರಾತನ ಮತ್ತು ಕಾರಣಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕೂಡ್ಲು ಗ್ರಾಮದ ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಶಿಲಾಮಯ ಗರ್ಭಗೃಹಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆದಿದೆ. ಈ ಮೂಲಕ ಶೀಘ್ರದಲ್ಲೇ ನಡೆಸಲು ಉದ್ದೇಶಿಸಿರುವ ಪುನರ್ ನಿರ್ಮಾಣ, ಪುನಃ ಪ್ರತಿಷ್ಠೆ, ಬ್ರಹ್ಮಕಲಶಾದಿಗಳ ಪೂರ್ವಭಾವಿ ಚಟುವಟಿಕೆಗಳಿಗೆ ನಾಂದಿಯಾಗಿದೆ.
ಶುಕ್ರವಾರ ಈ ಸಂಬಂಧ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶಿಲಾನ್ಯಾಸ ನಡೆಸಿದರು. ದೇವಾಲಯದ ತಂತ್ರಿ ಕೃಷ್ಣ ಗುರೂಜಿ ಕುಕ್ಕಾಜೆ, ಡಳಿತ ಮೊಕತೇಸರ ಅಚ್ಯುತ ಕೆ., ಧರ್ಮದರ್ಶಿ ನಾರಾಯಣ ಪೂಜಾರಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ಡಾ. ಅನಂತ ಕಾಮತ್, ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಮೋಹನ್ ರಾಜ್ ಕಾಳ್ಯಂಗಾಡು, ಹರೀಶ್ ಕೊಳ್ಕೇಬೈಲು, ಶಾಂತಕುಮಾರ್ ಮುಂಡಿತ್ತಡ್ಕ ಮೊದಲಾದವರು ನೇತೃತ್ವ ವಹಿಸಿದ್ದರು. ನೂರಾರು ಮಂದಿ ಭಗವದ್ಭಕ್ತರು, ತಾಯಂದಿರು, ಮಕ್ಕಳು ಭಾಗಿಗಳಾದರು.
ಈ ಸಂಬಂಧ ಜೀರ್ಣೋದ್ಧಾರ ಸಮಿತಿಯೊಂದನ್ನು ರಚಿಸಲಾಗಿದ್ದು, ಕಾರ್ಯಚಟುವಟಿಕೆಗಳು ಮುಂದುವರಿಯುತ್ತಿವೆ. ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅವರು ಗೌರವಾಧ್ಯಕ್ಷರಾಗಿ, ಮೋಹನ್ ರಾಜ್ ಕಾಳ್ಯಂಗಾಡು ಅವರು ಅಧ್ಯಕ್ಷರಾಗಿ, ಹರೀಶ್ ಕೊಳ್ಕೆಬೈಲು ಅವರು ಪ್ರಧಾನ ಕಾರ್ಯದರ್ಶಿಯಾಗಿ, ಶಾಂತಕುಮಾರ್ ಮುಂಡಿತ್ತಡ್ಕ ಕೋಶಾಧಿಕಾರಿಯಾಗಿರುವ ಸಮಿತಿ ಊರ ಹತ್ತು ಸಮಸ್ತರನ್ನು ಸೇರಿಸಿಕೊಂಡು ಅವಿರತ ದುಡಿಮೆ ನಡೆಸುತ್ತಿದೆ. ನೂರಾರು ಮಂದಿ ಕಾರ್ಯಕರ್ತರು ಈ ನಿಟ್ಟಿನಲ್ಲಿ ಅಹೋರಾತ್ರಿ ಸೇವೆ ಸಲ್ಲಿಸುತ್ತಿದ್ದಾರೆ.
ದೇವಾಲಯದ ಗರ್ಭಗುಡಿಯ ಪುನರ್ ನಿರ್ಮಾಣ, ನಾಗದೇವರ ಕಟ್ಟೆ ಪುನರ್ ನಿರ್ಮಾಣ, ಆಂಜನೇಯ ಮತ್ತು ವೀರಭದ್ರ ದೇವರ ಸ್ಥಾನಪಲ್ಲಟ ಮತ್ತು ಪುನರ್ ನಿರ್ಮಾಣ, ಕಲ್ಲರ್ಟಿ, ಗುಳಿ ಸನ್ನಿಧಿ ಪುನರ್ ನಿರ್ಮಾಣ, ನೂತನ ದರ್ಶನ ಮಂಟಪ ಸಹಿತ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ಸುಮಾರು ಒಂದು ಕೋಟಿ ರೂ.ಗೂ ಅಧಿಕ ವೆಚ್ಚ ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಊರ-ಪರವೂರ ಭಗವದ್ಭಕ್ತರ ತನು-ಮನ-ಧನ ಸಹಾಯಕ, ಸಹಕಾರ ನಿರೀಕ್ಷಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
0 Comments