ಲೇಖಕಿ ಚೇತನಾ ಕುಂಬ್ಳೆಯವರ ಈ ಕೃತಿಯು ಕನ್ನಡ ಸಂಘ ಕಾಂತಾವರ(ರಿ) ಹೊರತಂದಿರುವ 'ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 368ನೇ ಕುಸುಮ. ಗಡಿನಾಡ ಚೇತನರಾದ ಶ್ರೀ ರಾಧಾಕೃಷ್ಣ ಉಳಿಯತ್ತಡ್ಕರವರು ಬೆಳೆದು ಬಂದ ದಾರಿ, ಅವರ ಸಾಹಿತ್ಯ ಕೃಷಿ, ಆದರ್ಶಯುತ ಜೀವನದ ಬಗ್ಗೆ ದಾಖಲಿಸಿದ ಲೇಖಕಿಗೆ ಅಭಿನಂದನೆಗಳು.
ಇದೇ ಗ್ರಂಥಮಾಲೆಯಲ್ಲಿ ಉಳಿಯತ್ತಡ್ಕರವರು ಇದುವರೆಗೆ ಎಂಟು ಸಾಧಕರ ಬಗ್ಗೆ ಕೃತಿಗಳನ್ನು ಹೊರತಂದಿದ್ದು ಈ ಬಾರಿ ಅವರನ್ನೇ ಪರಿಚಯಿಸಿದ ಕೃತಿಯೊಂದು ಹೊರಬಂದಿರುವುದು ತುಂಬಾ ಸಂತಸ ಮತ್ತು ಹೆಮ್ಮೆಯ ವಿಚಾರ. ಅವರ ಹೆಚ್ಚಿನ ಎಲ್ಲಾ ಕೃತಿಗಳನ್ನು ಓದಿದ್ದ ನನಗೆ ಇವುಗಳೆಲ್ಲದರ ಸಾರಾಂಶವನ್ನು ಹಿಂಡಿ ತೆಗೆದ ಜೊತೆಗೆ ಅವರ ಬಾಲ್ಯ, ಶಿಕ್ಷಣ, ಉದ್ಯೋಗ, ಸಂಸಾರ, ಸಾಮಾಜಿಕ ಬದುಕು ಹೀಗೆ ಸಮಗ್ರ ವ್ಯಕ್ತಿ ಚಿತ್ರಣವನ್ನು ನೀಡಿದ ಈ ಕೃತಿಯು ಅವರಂತೆಯೇ ಆಪ್ತವಾಯಿತು. ಲೇಖಕಿಯ ಬರವಣಿಗೆಯಲ್ಲಿ ಯಾವುದೇ ಕೃತಕತೆ ಇಲ್ಲ. ಸಹಜವಾದ ಅವರ ನಡೆ, ನುಡಿಯನ್ನು ಅಷ್ಟೇ ಸರಳವಾಗಿ, ಸುಂದರವಾಗಿ ತಿಳಿಸಿದ್ದಾರೆ.
ಉಳಿಯತ್ತಡ್ಕರವರ ತಂದೆಯವರು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದವರು ಮತ್ತು ತಾಯಿಯವರು ಅಧ್ಯಾಪಕಿಯಾಗಿದ್ದವರು. ಹಾಗಾಗಿ ಅವರಿಗೆ ಶಿಸ್ತು, ಸಹೃದಯತೆ, ಬುದ್ಧಿಮತ್ತೆ ಎಲ್ಲವೂ ಹುಟ್ಟಿನಿಂದಲೇ ಬಂದಿರಬಹುದು. ನಂತರ ಅವರು ಅದನ್ನೆಲ್ಲ ಬೆಳೆಸಿಕೊಂಡು ಸಾಗಿದ ದಾರಿ ಅನುಸರಣೀಯ. ಹಲವಾರು ಕವನಸಂಕಲನಗಳು, ಸಾಹಿತ್ಯ ಸಮೀಕ್ಷೆಯ ಕೃತಿಗಳು, ವ್ಯಕ್ತಿಚಿತ್ರಣದ ಕೃತಿಗಳು, ಸಂಪಾದಿತ ಕೃತಿಗಳು ಹೀಗೆ ವಿವಿಧ ಪ್ರಾಕಾರಗಳ ಕೃತಿಗಳು ಶ್ರೀಯುತರಿಂದ ಹೊರಬಂದಿದ್ದು ಅವರ ಸಾಹಿತ್ಯ ಕೃಷಿ ವಿಸ್ತಾರವಾಗಿ ಹರಡಿಕೊಂಡಿದೆ.
ಈ ನನ್ನ ಶಬ್ದಗಳು, ನೋವ ಜಿನುಗುವ ಜೀವ, ಬೆಂಕಿ ನುಗುವ ಹುಡುಗ, ಹದಿಹರೆಯದ ಹನಿಗಳು, ಅರ್ಧ ಸತ್ಯದ ಬೆಳಕು, ರಾಮ ಕಂಡ ಭೀಮ, ನೆಲದ ಧ್ಯಾನ, ಅಕ್ಷರ ಮತ್ತು ಆಕಾಶ ಹೀಗೆ ಉಳಿಯತ್ತಡ್ಕರವರ ಕೃತಿಗಳ ಶೀರ್ಷಿಕೆಯೇ ತುಂಬಾ ಆಕರ್ಷಕ. ಮಾತ್ರವಲ್ಲ ಹೂರಣ ಅಷ್ಟೇ ಮೌಲ್ಯಯುತ. ವಿಮರ್ಶಾತ್ಮಕ ದೃಷ್ಟಿಕೋನದ ಅನುಭವಿ ಸಾಹಿತಿಗಳಾದ ಅವರು ಸಂಶೋಧನಾ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕರಾಗಬಲ್ಲರು. ತುಳುನಾಡಿನ ಮೂಲನಿವಾಸಿಗಳಾದ ಮೊಗೇರರ ಕುಟುಂಬದಲ್ಲಿ ಜನಿಸಿದ ಇವರ ಸಮುದಾಯದವರನ್ನು ಭೂಮಿಪುತ್ರರೆಂಬುದಾಗಿ ಇಲ್ಲಿ ಲೇಖಕಿಯು ಉಲ್ಲೇಖಿಸಿದ್ದಾರೆ. ಭೂಮಿಪುತ್ರರೊಬ್ಬರು ಹೇಗೆ ಸರಸ್ವತೀ ಪುತ್ರರಾಗಿಯೂ ಬೆಳೆದು ನಿಂತಿದ್ದಾರೆ ಎಂಬುದನ್ನು ಈ ಕೃತಿಯು ತಿಳಿಸುತ್ತದೆ ಅನ್ನುವ ಅನುಭವ ಪ್ರತಿಯೊಬ್ಬ ಓದುಗನಿಗೂ ಆಗುವುದರಲ್ಲಿ ಸಂಶಯವಿಲ್ಲ.
ಲೇಖಕಿಯು ಅವರೊಂದಿಗೆ ಮಾತುಕತೆ ನಡೆಸಿ ಕಾವ್ಯದ ಬಗ್ಗೆ ಅವರ ಅಭಿಪ್ರಾಯವನ್ನು ಈ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಮಾತಿನಲ್ಲಿ ನಡೆಯುವ, ಮಾತನ್ನು ಕಡೆಯುವ ಕ್ರಿಯೆಯೇ ಕಾವ್ಯ. ಅದು ನಿಜವೂ ಹೌದು. ಕಾವ್ಯವು ಭಾವನೆಗಳ ಸಾಂದ್ರರೂಪ. ಭಾಷೆಯ ಮೂಲಕ ಭಾವ ಅನುಭವಗಳನ್ನು ಅಭಿವ್ಯಕ್ತಿಸುವ ಮಾಧ್ಯಮ. ಅದು ಹೃದಯದಲ್ಲಿ ಹುಟ್ಟಿ ಮನಸ್ಸಿನಲ್ಲಿ ಬೆಳೆಯುತ್ತದೆ. ಭಾವದಲ್ಲಿ ಹುಟ್ಟಿ ಬುದ್ಧಿಯಲ್ಲಿ ವಿಕಾಸಗೊಳ್ಳುತ್ತದೆ. ಧ್ವನಿಸುವಿಕೆ ಕಾವ್ಯದ ಅತ್ಯಂತ ಶ್ರೇಷ್ಠ ಗುಣ. ಧ್ವನಿ ಅದರ ಆತ್ಮ. ಭಾಷೆಯಲ್ಲಿ ಧ್ವನಿಶಕ್ತಿ ಇರಬೇಕು. ಉಚ್ಚಾರಧ್ವನಿ, ಅರ್ಥಧ್ವನಿ ಇರಬೇಕು. ಕವಿ ಸಮಾಜದ ಸೂಕ್ಷ್ಮತೆಗಳನ್ನು ಗಮನಿಸಬೇಕು. ಕಾವ್ಯದಲ್ಲಿ ಅರ್ಥ ಸ್ಫುರಿಸುವುದು ಅದರ ಸಾಮಾಜಿಕ, ಸಾಂಸ್ಕೃತಿಕ ಹಿನ್ನಲೆಯಲ್ಲಿ ಎಂಬುದು ಅವರ ಅಭಿಪ್ರಾಯ.
ಮಾತ್ರವಲ್ಲ ಕಾವ್ಯಸೃಷ್ಟಿ ಮಾಡುವವರಿಗೆ ಅಧ್ಯಯನ, ಅನುಭವ ಬೇಕು. ಹಿರಿಯ ಕವಿಗಳ ಕೃತಿಗಳನ್ನು ಓದಬೇಕು. ಸಿದ್ಧತೆ, ಬದ್ಧತೆ ಇರಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಕವಿಗೆ ಪ್ರತಿಭೆ ಇರಬೇಕು. ಭಾಷೆಯನ್ನು ದುಡಿಸಿಕೊಳ್ಳಬೇಕು. ಸಶಕ್ತವಾದ ಪದಬಂಧಗಳಲ್ಲಿ ಕಾವ್ಯ ರೂಪುಗೊಳ್ಳಬೇಕು. ಕವಿಗಳು ಕೃತಕತೆಗೆ ತಲೆಬಾಗದೆ ನೈಜತೆಯನ್ನು ಅಭಿವ್ಯಕ್ತಿಸಬೇಕು. ಸಾಮಾಜಿಕ ಪರಿವರ್ತನೆಗೆ ತಕ್ಕುದಾದ ಮನಸ್ಸನ್ನು, ಪರಿಸರವನ್ನು ನಿರ್ಮಿಸಬೇಕು. ಕಾವ್ಯ ಸ್ವಗತವಾಗಬಾರದು. ಸಮಾಜಕ್ಕೆ ಕನ್ನಡಿ ಹಿಡಿಯಬೇಕು. ಸಮಕಾಲೀನ ಸಂದರ್ಭವನ್ನು ಧ್ವನಿಸಬೇಕು. ಸಮಾಜ ವಿಮರ್ಶೆಗೆ ಮುಂದಾಗಬೇಕು. ಜನಪರವಾಗಬೇಕು. ಕಾವ್ಯಪ್ರೀತಿ ಹೊಸ ಜನಾಂಗದ ಸಂಸ್ಕೃತಿಯಾಗಿ ಬರಬೇಕು. ಮೂಲಭೂತ ಬದಲಾವಣೆಗೆ ಕ್ರಿಯಾಶೀಲನಾಗುವುದು ಕವಿಯ ಜವಾಬ್ದಾರಿ. ಸಾಮಾಜಿಕ ಪರಿವರ್ತನೆ ಆಗುತ್ತಿರುವ, ನಾವು ಬಯಸುತ್ತಿರುವ ಈ ಕಾಲದಲ್ಲಿ ಕಾವ್ಯವಾಗಲಿ, ಸಾಹಿತ್ಯವಾಗಲಿ, ಪ್ರತ್ಯಕ್ಷವಾಗಿ, ನೇರವಾಗಿ ಯಾವ ಕೆಲಸವನ್ನೂ ಮಾಡಲಾರದು ಎಂಬ ಮಾತಿದೆ. ಆದರೆ ನಿಧಾನವಾಗಿ, ಹಂತ ಹಂತವಾಗಿ ಪರಿವರ್ತನೆಗೆ ತಕ್ಕ ಮನಸ್ಸನ್ನು, ಭಾವ ಪರಿಸರವನ್ನು ಹುಟ್ಟಿಸಬಲ್ಲುದು ಎಂಬುದು ಉಳಿಯತ್ತಡ್ಕರವರ ಅಭಿಮತ.
ಕಾಸರಗೋಡಿನಲ್ಲಿ ಕನ್ನಡದ ಉಳಿವಿಗಾಗಿ ಅವರು ಮಾಡಿದ ಕಾರ್ಯಗಳು, ಪತ್ರಕರ್ತರಾಗಿ ಅವರ ಜೀವನ ಇವೆಲ್ಲದರ ಬಗ್ಗೆ ಲೇಖಕಿಯು ನೋಟ ಬೀರಿದ್ದಾರೆ. ಪ್ರಶಸ್ತಿ, ಸನ್ಮಾನಗಳ ಬಗ್ಗೆ ಯಾವುದೇ ಅಪೇಕ್ಷೆಯಿರದ, ಅರಸಿಬಂದ ಪ್ರಶಸ್ತಿಗಳಿಂದ ಕಿಂಚಿತ್ತೂ ಅಹಂಕಾರವಿರದ ವ್ಯಕ್ತಿತ್ವ ಅವರದು. ಆದರೆ ಕೃತಿಯಲ್ಲಿ ದಾಖಲಾಗಿಸುವ ದೃಷ್ಟಿಯಿಂದ ಅವುಗಳನ್ನು ಲೇಖಕಿ ಉಲ್ಲೇಖಿಸಿದ್ದಾರೆ. ಅಲ್ಲದೆ ಉಳಿಯತ್ತಡ್ಕರವರು ಲೇಖಕಿಯೊಂದಿಗಿನ ಮಾತುಕತೆಯಲ್ಲಿ ತನಗೆ ಮಾರ್ಗದರ್ಶನ ನೀಡಿದ, ತಾನು ಪ್ರಭಾವಿತನಾದ ಎಲ್ಲಾ ಗುರುಗಳನ್ನೂ ಹಿರಿಯರನ್ನೂ ಸ್ಮರಿಸಿರುವುದು ಅವರ ವ್ಯಕ್ತಿತ್ವವನ್ನು ಇನ್ನೂ ಉನ್ನತ ಮಟ್ಟಕ್ಕೆ ಏರಿಸುತ್ತದೆ. ಅವರಿಂದ ಪ್ರಭಾವಿತರಾದ, ಮಾರ್ಗದರ್ಶನ ಪಡೆದ ಹಲವರಲ್ಲಿ ನಾನೂ ಒಬ್ಬಳು ಎಂಬುದನ್ನು ಗೌರವಪೂರ್ವಕವಾಗಿ ನೆನಪಿಸಿಕೊಳ್ಳುತ್ತಾ ಅವರಿಗೆ ಆರೋಗ್ಯ, ದೀರ್ಘಾಯುಷ್ಯವನ್ನು ಭಗವಂತನು ಕರುಣಿಸಿ ಸಾಂಸಾರಿಕ, ಸಾಮಾಜಿಕ, ಸಾಹಿತ್ಯಿಕ ಜೀವನದಲ್ಲಿ ಮತ್ತಷ್ಟು ಕೀರ್ತಿಯನ್ನು ನೀಡಲಿ ಎಂಬುದಾಗಿ ಶುಭ ಹಾರೈಕೆ
ಬರಹ ,: ಅಶ್ವಿನಿ ಕೋಡಿಬೈಲು, ಸುಳ್ಯ

0 Comments