ಪೆರ್ಲ : ತ್ರಿಸ್ತರ ಪಂಚಾಯತ್ ಚುನಾವಣೆಯ ನಾಮಪತ್ರಿಕೆ ಅಂತಿಮವಾಗುತ್ತಿದ್ದಂತೆ ವಿವಿಧ ಪಕ್ಷಗಳು ಭರದ ಪ್ರಚಾರಕ್ಕಿಳಿದಿರುವುದು ಕಂಡು ಬರುತ್ತಿದೆ. ಈಗಾಗಲೇ ಅಭ್ಯರ್ಥಿಗಳ ಹೆಸರು ಹಾಗೂ ಚಿಹ್ನೆ ನಿಖರಗೊಳಿಸಲಾಗಿದ್ದು ಜನ ಮನದ ಅಭಿಮತವನ್ನು ಅಭ್ಯರ್ಥಿಗಳು ಅರಸುತ್ತಾ ನಡೆಯುತ್ತಿರುವುದು ಕಂಡು ಬರುತ್ತಿದೆ. ಈ ವರ್ಷದ ಅಭ್ಯರ್ಥಿಗಳಲ್ಲಿ ಕೆಲವೆಡೆ ಗಂಡ ಹೆಂಡತಿ ಇಬ್ಬರು ಸಮಾಜ ಸೇವೆಯ ಸದುದ್ದೇಶದಿಂದ ಚುನಾವಣೆಗೆ ಸ್ಪರ್ಧಿಸ ಹೊರಟಿರುವುದು ವಿಶೇಷತೆಯಾಗಿದೆ.
ಎಣ್ಮಕಜೆ ಗ್ರಾಮ ಪಂಚಾಯತಿನ ಮಣಿಯಂಪಾರೆ ನಿವಾಸಿಗಳಾದ ಅನಿಲ್ ಕುಮಾರ್ ಕೆ.ಪಿ - ಸುನೀತಾ ಅನಿಲ್ ಕುಮಾರ್ ದಂಪತಿಗಳು ಈ ಬಾರಿ ಬ್ಲೋಕ್ ಪಂಚಾಯತ್ ಹಾಗೂ ವಾರ್ಡ್ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಅನಿಲ್ ಕುಮಾರ್ ಮಂಜೇಶ್ವರ ಬ್ಲೋಕ್ ಪಂಚಾಯತ್ ನ ಹಾಲಿ ಸದಸ್ಯರಾಗಿರುವ ಅನುಭವ ಗಳಿಸಿಕೊಂಡಿದ್ದರೆ. ಸುನೀತಾ ಅನಿಲ್ ಕುಮಾರ್ ಮೊತ್ತ ಮೊದಲ ಬಾರಿಗೆ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಮಣಿಯಂಪಾರೆಯ ಓಂ ಬ್ರದರ್ಸ್, ಟೀಮ್ ಛತ್ರಪತಿ,ನ್ಯಾಷನಲ್ ವಿಶ್ವಕರ್ಮ ಫೆಡರೇಶನ್ ಮೊದಲಾದ ಸಂಘಟನೆಗಳಲ್ಲಿ ಸಕ್ರಿಯರಾಗಿ ಅನುಭವ ಗಳಿಸಿಕೊಂಡಿರುವ ಅನಿಲ್ ಕುಮಾರ್ ಈ ಹಿಂದೆ ತಾನು ಬ್ಲೋಕ್ ಪಂ.ಸದಸ್ಯನಾಗಿರುವಾಗ ಮಾಡಿದ ಸಮಾಜ ಮುಖಿ ಕಾರ್ಯಗಳನ್ನು ಗುರುತಿಸಿ ಬಿಜೆಪಿ ಪಕ್ಷವು ಮಂಜೇಶ್ವರ ಬ್ಲೋಕ್ ಪಂ.8ನೇ ಡಿವಿಶನ್ ಪುತ್ತಿಗೆಯಲ್ಲಿ ತನಗೆ ಅವಕಾಶ ನೀಡಿರುವುದಾಗಿ ತಿಳಿಸಿದ್ದಾರೆ.ಇದೇ ವೇಳೆ ಇವರ ಪತ್ನಿ ಸುನಿತಾ ಸ್ಥಳೀಯ ಕುಟುಂಬಶ್ರೀ, ಸ್ವಸಹಾಯ ಸಂಘಗಳಲ್ಲಿ ಸಕ್ರಿಯರಾಗಿದ್ದು ಎಣ್ಮಕಜೆ ಪಂಚಾಯತಿನ 15ನೇ ವಾರ್ಡ್ ಶೇಣಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

0 Comments