Ticker

6/recent/ticker-posts

Ad Code

ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ಮೋದಿ ಭೇಟಿ : ಸಿದ್ಧತೆ ಪೂರ್ಣ, ಸ್ವಾಗತಕ್ಕೆ ಕ್ಷಣ ಗಣನೆ ಆರಂಭ

 

ಉಡುಪಿ : ಉಡುಪಿ ಶ್ರೀಕೃಷ್ಣ ಮಠಕ್ಕೆ ನಾಳೆ  ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಅವರನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಗೀತಾಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮಧ್ಯಾಹ್ನ 12 ಗಂಟೆಗೆ ಪ್ರಧಾನಿಯವರು ಕೃಷ್ಣಮಠಕ್ಕೆ ಬರಲಿದ್ದು, ಮೊದಲು ಕನಕದಾಸರಿಗೆ ಪುಷ್ಪಾರ್ಚನೆ ಮಾಡುವರು ಬಳಿಕ ಕನಕನ ಕಿಂಡಿಗೆ ಹೊದಿಸಿರುವ ಚಿನ್ನದ ಕವಚ, ಸುವರ್ಣ ತೀರ್ಥ ಮಂಟಪವನ್ನು ಅನಾವರಣಗೊಳಿಸುವರು ಎಂದರು. ಪ್ರಧಾನಿಯವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಿದ್ದು ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಹಾಗೂ ಸುವರ್ಣ ಪಾದುಕೆಯ ದರ್ಶನ ಮಾಡಲಿದ್ದಾರೆ. ಬಳಿಕ ಅವರಿಗೆ ದೇವರ ಪ್ರಸಾದ ನೀಡಲಾಗುವುದು' ಎಂದು ಹೇಳಿದರು. ಸರ್ವಜ್ಞ ಪೀಠ, ಗೋಶಾಲೆ ದರ್ಶನ ಮಾಡಿದ ಬಳಿಕ ಅವರು ಗೀತಾಮಂದಿರಕ್ಕೆ ಭೇಟಿ ನೀಡುವರು. ಅಲ್ಲಿ ಲಘು ಉಪಾಹಾರ ಸೇವಿಸುವರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಕ್ಷ ಕಂಠ ಗೀತಾ ಕಾರ್ಯಕ್ರಮದ ಅಂಗವಾಗಿ ಭಗವದ್ಗೀತೆಯ 18ನೇ ಅಧ್ಯಾಯದ ಕೊನೆಯ ಕೆಲವು ಶ್ಲೋಕಗಳನ್ನು ಪಠಿಸುವರು' ಎಂದು ತಿಳಿಸಿದರು. ಶ್ಲೋಕಗಳ ಪಾರಾಯಣದ ಬಳಿಕ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಮೋದಿ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ. ಮೋದಿಯವರು ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನೂ ಪಡೆಯುವರು ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯಪಾಲ ಥಾವರ್‌ಚಂದ್ ಗೆಹೋಟ್, ಸಚಿವ ಬೈರತಿ ಸುರೇಶ್ ಅವರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸ್ವಾಗತ ಭಾಷಣ ಮಾಡುವರು. ಅಷ್ಟ ಮಠದ ಸ್ವಾಮೀಜಿಗಳಿಗೆ ಆಹ್ವಾನ ನೀಡಿದ್ದೇವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಠದ ದಿವಾನ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments