Ticker

6/recent/ticker-posts

Ad Code

ಕುಂಟಿಕಾನ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ

 

ಬದಿಯಡ್ಕ : ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಕಾಸರಗೋಡಿನ ನಿವೃತ್ತ ಡಿಡಿಇ  ನಂದಿಕೇಶನ್ ಎನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ "ಆಧುನಿಕತೆಯ ಭರಾಟೆಯ ನಡುವೆಯೂ  ಗ್ರಾಮೀಣ ಪ್ರದೇಶದ ಸುಂದರ ವಾತಾವರಣದಲ್ಲಿ ಮಾತೃಭಾಷಾ ಕಲಿಕೆಯೊಂದಿಗೆ ಅರಳುವ ಶುದ್ಧ ಮನಸ್ಸಿನ ಪ್ರತಿಭೆಗಳು ನಿಜಾರ್ಥದಲ್ಲಿ ಅಭಿನಂದನೆಗೆ ಅರ್ಹರಾದವರು. ಗುಣಮಟ್ಟದ ಶಿಕ್ಷಣದಲ್ಲಿ ಓದು, ಬರಹದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳಿಗೆ ಬೆಳಗಲು ಬಹಳಷ್ಟು ಅವಕಾಶಗಳಿದ್ದು, ಶಾಲೆಯಲ್ಲಿ ಅವುಗಳಿಗೆ ಪ್ರಾಶಸ್ತ್ಯ ನೀಡುತ್ತಿರುವುದಕ್ಕೆ ಕುಂಟಿಕಾನ ಶಾಲೆಯ ಮಕ್ಕಳ ಸಾಧನೆಯು ಉತ್ತಮ ನಿದರ್ಶನ" ಎಂದು ಹೇಳಿದರು. ಅಗತ್ಯ ಮೂಲ ಸೌಕರ್ಯ ಒದಗಿಸಿಕೊಡುವಲ್ಲಿ ವ್ಯವಸ್ಥಾಪಕರ ವಿಶೇಷ ಕಾಳಜಿಯನ್ನು ಶ್ಲಾಘಿಸಿದ ಅವರು  ಶಿಕ್ಷಕ ವೃಂದದ ಸಮರ್ಪಕ ಮಾರ್ಗದರ್ಶನ ಹಾಗೂ ಪ್ರಯತ್ನದ ಜೊತೆಗೆ ರಕ್ಷಕರ ಪ್ರೋತ್ಸಾಹ, ಬೆಂಬಲವೂ ಜೊತೆಗೂಡಿದಾಗ ಮಾತ್ರ ಇಂತಹ ಗ್ರಾಮೀಣ ಪ್ರತಿಭೆಗಳು ಅರಳಿ ಮುನ್ನೆಲೆಗೆ ಬರಲು ಸಾಧ್ಯ ಎಂದರು.

ಶಾಲೆಯ ಈ ವರ್ಷದ ಸ್ಪೋರ್ಟ್ಸ್, ಗೇಮ್ಸ್, ವಿಜ್ಞಾನ, ವೃತ್ತಿ ಪರಿಚಯ ಮೇಳದ ಸಾಧಕರು ಹಾಗೂ ಉಪಜಿಲ್ಲಾ ಕಲೋತ್ಸವದಲ್ಲಿ ಭಾಗವಹಿಸಿ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಹೀಗೆ ಒಟ್ಟು 45 ಮಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಈ ಬಾರಿ ಹ್ಯಾಂಡ್ ಬಾಲ್ ಹಾಗೂ ಟೇಬಲ್ ಟೆನ್ನಿಸ್ ನಲ್ಲಿ ತಲಾ ಇಬ್ಬರಂತೆ ಒಟ್ಟು ನಾಲ್ಕು ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸ್ಥಾನ ಪಡೆದಿದ್ದರು. ಮಾತ್ರವಲ್ಲದೆ ಜಿಲ್ಲಾ ಮಟ್ಟದ ಫುಟ್ಬಾಲ್ ತಂಡದಲ್ಲೂ ಒಬ್ಬ ವಿದ್ಯಾರ್ಥಿಗೆ ಅವಕಾಶ ಲಭಿಸಿತ್ತು. ಉಪಜಿಲ್ಲಾ ಮಟ್ಟದ ಸಬ್ ಜೂನಿಯರ್ ಹುಡುಗರ ಹಾಗೂ ಹುಡುಗಿಯರ ಹ್ಯಾಂಡ್ ಬಾಲ್ ಸ್ಪರ್ಧೆಗಳಲ್ಲಿ  ಪ್ರಥಮ ಸ್ಥಾನ, ಟೇಬಲ್ ಟೆನ್ನಿಸ್ ನಲ್ಲಿ ದ್ವಿತೀಯ,  ಯು.ಪಿ ಕಿಡ್ಡಿಸ್ ರಿಲೇ ಹಾಗೂ ಎಲ್.ಪಿ ಕಿಡ್ಡಿಸ್ ಲಾಂಗ್ ಜಂಪ್ ನಲ್ಲಿ ಪ್ರಥಮ, ಯು.ಪಿ  ವಿಭಾಗ ದಲ್ಲಿ ದ್ವಿತೀಯ ಸ್ಥಾನವೂ ಲಭಿಸಿದೆ. ವೃತ್ತಿ ಪರಿಚಯ ಮೇಳದ ಬ್ಯಾಂಬೂ ಪ್ರಾಡಕ್ಟ್ ಹಾಗೂ ಮೆಟಲ್ ಎನ್ಗ್ರೇವಿಂಗ್ ನಲ್ಲೂ ಶಾಲೆಗೆ ಮೊದಲ ಸ್ಥಾನ ಲಭಿಸಿದೆ. ಮುಳ್ಳೇರಿಯಾದಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲೂ ಮಕ್ಕಳು ಉತ್ತಮ ಸಾಧನೆ ತೋರಿದ್ದು, ಸಂಸ್ಕೃತ ಕಲೋತ್ಸವದಲ್ಲಿ ಶಾಲೆಗೆ ತೃತೀಯ ಸ್ಥಾನವಿದೆ. ಒಟ್ಟು ನಾಲ್ಕು ಸ್ಪರ್ಧೆಗಳಲ್ಲಿ ಮಕ್ಕಳು ಜಿಲ್ಲಾ ಮಟ್ಟದಲ್ಲೂ ಭಾಗವಹಿಸಲಿದ್ದಾರೆ.

          ಶಾಲೆಯ ರಕ್ಷಕ-ಶಿಕ್ಷಕ ಸಂಘದ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಪಿಟಿಎ ಅಧ್ಯಕ್ಷ ಕಮರುದ್ದೀನ್ ಪಾಡಲಡ್ಕ ಅಧ್ಯಕ್ಷತೆ  ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಎ.ರಾಧಾಕೃಷ್ಣನ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಶರ್ಮ, ಹಿರಿಯ ಆಧ್ಯಾಪಿಕೆ ಮುಕಾಂಬಿಕಾ ಕೆ,  ಮಾತೃ ಸಂಘದ ಅಧ್ಯಕ್ಷೆ   ಆಶಾಮೋಳ್, ಎಸ್.ಆರ್.ಜಿ  ಕನ್ವೀನರ್  ಶ್ರೀಮತಿ ದಿನ ಟೀಚರ್ ಶುಭ ಹಾರೈಸಿದರು. ಸ್ಟಾಫ್ ಸೆಕ್ರೆಟರಿ ಪ್ರಶಾಂತ ಕುಮಾರ್ ಬಿ ವಂದಿಸಿದರು. ಅಧ್ಯಾಪಕರಾದ ಪ್ರಶಾಂತ್ ಕುಮಾರ್ ಕೆ. ಹಾಗೂ ಶರತ್  ಕುಮಾರ್ ಯಂ  ನಿರೂಪಿಸಿದರು.

Post a Comment

0 Comments