ಪಾಣಾಜೆ: ಸ್ವರ್ಗ ಸಮೀಪ ತೂಂಬಡ್ಕದಲ್ಲಿ ಶುಕ್ರವಾರ ಸಂಜೆ ಚಿರತೆ ಕಂಡು ಬಂದಿದ್ದು ನಾಗರಿಕರಲ್ಲಿ ಆತಂಕ ಮನೆ ಮಾಡಿದೆ. ಕೇರಳ ಕರ್ನಾಟಕ ಗಡಿಭಾಗವಾದ ತೂಂಬಡ್ಕ ಬಯಲಿನ ಕಲ್ಲುಕೋರೆ ಸಮೀಪ ಮುಳಿಹುಲ್ಲು ಹೆರೆಯುತ್ತಿದ್ದ ಯಶೋಧ ಅವರಿಗೆ ಚಿರತೆ ಕಾಣಿಸಿದ್ದು ಭಯಗೊಂಡ ಅವರು ರಘುರಾಮ ರೈ ಎಂಬವರ ಮನೆಗೆ ಧಾವಿಸಿ ವಿಷಯ ತಿಳಿಸಿದ್ದಾರೆ. ಚಿರತೆ ಓಡಿದ ಭಾಗದಲ್ಲಿ ಚಿರತೆಯದ್ದು ಎಂದು ಊಹಿಸಲಾದ ಹೆಜ್ಜೆ ಗುರುತುಗಳು ಕಂಡು ಬಂದಿದೆ. ಮಹಿಳೆ ಹೇಳಿಕೆ ಪ್ರಕಾರ ಚಿರತೆ ಪಾಣಾಜೆ ಅರ್ಧಮೂಲೆ ಅಥವಾ ಸ್ವರ್ಗ ಬೈರಡ್ಕ ಭಾಗಕ್ಕೆ ತೆರಳಿರುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಚಿರತೆ ಇರುವುದು ಕೇರಳದಲ್ಲೋ ಕರ್ನಾಟಕದಲ್ಲೋ ಎಂದು ಹೇಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರಿಂದ ಅರಣ್ಯ ಇಲಾಖೆಗಳು ಗಮನಹರಿಸಿಲ್ಲ.
ಎರಡು ವಾರ ಹಿಂದೆ ಆರ್ಲಪದವು ಜಾಂಬ್ರಿ ಕಾಡಿನ ಮಧ್ಯೆ ಭರಣ್ಯ ಸುಡುಕುಳಿಯಲ್ಲಿ ಖಾಸಗಿ ಬಸ್ ಚಾಲಕ ಉದಯ ಕುಮಾರ್ ಚಿರತೆಯನ್ನು ನೋಡಿದ್ದರು. ಸ್ವರ್ಗದಿಂದ ಪಾಣಾಜೆ ಸೂರಂಬೈಲು ಶಾಲೆ, ಭರಣ್ಯ ಮೂಲಕ ಜಾಂಬ್ರಿ ಗುಹೆ, ಆರ್ಲಪದವು ತೆರಳುವ ಕಾಡುದಾರಿ ಇದಾಗಿದೆ. ತೂಂಬಡ್ಕದಿಂದ ಭರಣ್ಯ ಸುಡುಕುಳಿಗೆ ಕೇವಲ ಒಂದೆರಡು ಕಿ.ಮೀ.ಅಂತರವಿದೆ. ಕಾಡು ಹಾಗೂ ರಬ್ಬರ್ ತೋಟಗಳಿಂದ ಆವರಿಸಿದೆ.
ದೊಡ್ಡದೊಂದು ಪ್ರಾಣಿ ಓಡಿದ್ದನ್ನು ನೋಡಿದ್ದೇನೆ. ಆದರೆ ಪ್ರಾಣಿ ಯಾವುದೆಂದು ಗುರುತಿಸಲು ಸಾಧ್ಯವಾಗಿಲ್ಲ ಎಂದು ಈ ಪ್ರದೇಶದ ಟ್ಯಾಪಿಂಗ್ ಕಾರ್ಮಿಕ ತಿಳಿಸಿದ್ದಾರೆ. ಜನ ವಸತಿ ಪ್ರದೇಶದಲ್ಲಿ ಪದೇ ಪದೇ ಚಿರತೆ ಕಾಣಿಸುತ್ತಿದ್ದು, ಶಾಲಾ ಮಕ್ಕಳು, ರಬ್ಬರ್ ಟ್ಯಾಪಿಂಗ್ ಕಾರ್ಮಿಕರು, ತೋಟಕ್ಕೆ ನೀರು ಹಾಯಿಸುವ ಕೃಷಿಕರು ಒಳಗೊಂಡಂತೆ ಜನರು ಭಯಗೊಂಡಿದ್ದಾರೆ.


0 Comments