ಪೆರ್ಲ : ಬೆದ್ರಂಪಳ್ಳ ನಡುಬೈಲು ನಿವಾಸಿ ವಾಹನ ಚಾಲಕ ರಮೇಶ್ಚಂದ್ರ ರೈ ಅವರ ಮನೆ ಬುಧವಾರ ಅಪರಾಹ್ನ ಬೆಂಕಿ ಆಕಸ್ಮಿಕಕ್ಕೊಳಗಾಗಿ ಸಂಪೂರ್ಣ ನಾಶಗೊಂಡಿದ್ದು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಕಾರ್ಯಾಚರಣೆಯ ಮೂಲಕ ಅಗ್ನಿ ಶಮನ ಕಾರ್ಯ ನಡೆದಿತ್ತು. ಮನೆಯೊಳಗಿದ್ದ ಗೃಹೋಪಕರಣ ಮತ್ತು ಬಟ್ಟೆ ಬರೆ ಸಹಿತ ದಿನ ಬಳಕೆಯ ವಸ್ತುಗಳು ಹೊತ್ತಿ ಉರಿದು ಸಂಪೂರ್ಣ ಭಸ್ಮವಾಗಿದ್ದು ಈ ಬಗ್ಗೆ ತಿಳಿದುಕೊಂಡ ಕೊಡುಗೈದಾನಿ, ಸಮಾಜ ಸೇವಕ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರು ನೇರವಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಪುನರ್ವಸತಿ ಕಲ್ಪಿಸುವ ಭರವಸೆ ನೀಡಿ ಸಾಂತ್ವನ ನುಡಿದರು. ಎಣ್ಮಕಜೆ ಬಂಟ್ಸ್ ಸರ್ವೀಸ್ ಸೊಸೈಟಿಯ ಜತೆ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದ ರಮೇಶ್ಚಂದ್ರರ ಕುಟುಂಬದ ದುಃಖದಲ್ಲಿ ಭಾಗಿಯಾದ ಎಣ್ಮಕಜೆ ಬಂಟ್ಸ್ ಸಂಘ ಹಾಗೂ ಸೊಸೈಟಿಯ ಪದಾಧಿಕಾರಿಗಳು ಜಿಲ್ಲಾ ಬಂಟರ ಸಂಘದ ಪದಾಧಿಕಾರಿಗಳೊಡನೆ ಇಂದು ಆಗಮಿಸಿ ಸಕಾಲಿಕ ಸ್ಪಂದನೆಯಾಗಿ 20 ಸಾವಿರ ಸಹಾಯ ಧನದ ಚೆಕ್ ವಿತರಿಸಿದರು. ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಸುಬ್ಬಯ್ಯ ರೈ, ಕೋಶಾಧಿಕಾರಿ ಚಿದಾನಂದ ಆಳ್ವ ಮಂಜಕೊಟ್ಟಿಗೆ, ಕಾರ್ಯದರ್ಶಿ ಮೋಹನ್ ರೈ ಪೈವಳಿಕೆ, ಎಣ್ಮಕಜೆ ಬಂಟರ ಸಂಘದ ಅಧ್ಯಕ್ಷ ನಾರಾಯಣ ಆಳ್ವ ಎಣ್ಮಕಜೆ, ಜಿಲ್ಲಾ ಸಮಿತಿ ಸದಸ್ಯ ಬಿ.ಎಸ್.ಗಾಂಭೀರ್, ಸದಾಶಿವ ಶೆಟ್ಟಿಯವರ ಮಾರ್ಗದರ್ಶನದಂತೆ ಬಂಟರ ಭವನ ನಿರ್ಮಾಣ ಸಮಿತಿ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ ಮಜಿಬೈಲು,ಮಹಿಳಾ ಸಮಿತಿಯ ಅನ್ನಪೂರ್ಣ ರೈ ಕಿದೂರು ಮೊದಲಾದವರು ಮನೆಗೆ ಭೇಟಿ ನೀಡಿದ ನಿಯೋಗದಲ್ಲಿದ್ದರು.
ಮನೆಯೊಳಗಿನ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ದುರಂತ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು, ವಾಹನ ಚಾಲಕ ವೃತ್ತಿಯಲ್ಲಿ ದಿನ ನಿತ್ಯದ ಆದಾಯ ಕಂಡುಕೊಳ್ಳುತ್ತಿದ್ದ ರಮೇಶ್ಚಂದ್ರ ರೈ ಅವರ ಎರಡು ಹೆಣ್ಣು ಮಕ್ಕಳಿರುವ ಕುಟುಂಬದ ಬಟ್ಟೆ ಬರೆ ಸಮೇತ ಹೊತ್ತಿ ಉರಿದ ಕಾರಣ ಧರಿಸಲು ವಸ್ತ್ರ, ನಿಲ್ಲಲು ಆಶ್ರಯ ಇಲ್ಲದಂತಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮನೆಯೊಳಗಿದ್ದ ಮಹತ್ತರವಾದ ದಾಖಲೆಗಳ ಸಹಿತ ಎಲ್ಲವೂ ಕ್ಷಣ ಮಾತ್ರದಲ್ಲಿ ಉರಿದು ಭಸ್ಮವಾಗಿದೆ. ಕಾಸರಗೋಡಿನಿಂದ ಎರಡು ಅಗ್ನಿ ಶಾಮಕ ದಳಗಳು ಬಂದು ಒಂದೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅಗ್ನಿ ಶಮನ ಕಾರ್ಯ ನಡೆಸಲಾಗಿದೆ. ಇದೀಗ ಸುಮಾರು 80 ಲಕ್ಷ ರೂ ನಾಶ ನಷ್ಟ ಅಂದಾಜಿಸಲಾಗಿದ್ದು ಬಡ ಕುಟುಂಬದ ಇವರು ದುಡಿದು ಕೂಡಿಟ್ಟ ಒಂದಷ್ಟು ವಸ್ತು ವಗೈರೆ ನಾಶವಾದ್ದರಿಂದ ಮುಂದೆ ದಿಕ್ಕೆ ತೋಚದ ಪರಿಸ್ಥಿತಿಯಲ್ಲಿದ್ದಾರೆ. ಈ ಕುಟುಂಬಕ್ಕೆ ಪುನರ್ವಸತಿ ಕಲ್ಪಿಸಲು ಪ್ರತಿಯೊಬ್ಬರು ಸಹಕಾರ ನೀಡಬೇಕಾಗಿರುವುದು ಸಕಾಲಿಕವಾಗಿದೆ.

0 Comments