ಕಾಸರಗೋಡು : ಗಡಿನಾಡು ಕನ್ನಡಿಗರ ಸಮಸ್ಯೆಗಳು ಹಾಗೂ ಕೇರಳ ಸರ್ಕಾರದ ಮಲಯಾಳಂ ಭಾಷಾ ಬಿಲ್-2025ನ್ನು ತಡೆ ಹಿಡಿಯುವಂತೆ ಆಗ್ರಹಿಸಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೇರಳದ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಹಾರ್ಡೆಕರ್ಜೆರವರನ್ನು ಸಂಪರ್ಕಿಸಿ ಮನವಿ ಸಲ್ಲಿಸಲಾಯಿತು. ಇತ್ತೀಚೆಗೆ ಕೇರಳ ವಿಧಾನಸಭೆಯಲ್ಲಿ “ಮಲಯಾಳಂ ಭಾಷಾ ಬಿಲ್-2025” ಎಂಬ ಬಿಲ್ಲನ್ನು ಅಂಗೀಕರಿಸಿದೆ. ಈಗಾಗಲೇ 2017 ರ ಬಿಲ್ಲನ್ನು ಭಾರತದ ಮಾನ್ಯ ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ. ಕೇರಳ ಸರ್ಕಾರದಿಂದ ಪ್ರಸ್ತಾಪಿತ ಬಿಲ್ಲು ಸಂಪೂರ್ಣ ಅಸಾಂವಿಧಾನಿಕವಾಗಿದೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬಹಳ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಕನ್ನಡ ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಭಾರತ ಸರ್ಕಾರದ ಅಲ್ಪಸಂಖ್ಯಾತ ಸಚಿವಾಲಯ ಕೇರಳ ಸರ್ಕಾರಕ್ಕೆ ಹಲವಾರು ಬಾರಿ ಕೇರಳದ ಭಾಷಾ ಅಲ್ಪಸಂಖ್ಯಾತರ ಹಿತಗಳ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದೆ. ಕಾಸರಗೋಡಿನ ಸರಕಾರಿ ಮತ್ತು ಖಾಸಗಿ ಕನ್ನಡ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ 1ನೇ ತರಗತಿಯಿಂದ 10ನೇ ತರಗತಿವರೆಗೆ ಮಲಯಾಳಂನ್ನು ಕಡ್ಡಾಯವಾಗಿ ಕಲಿಸುವಂತೆ ಮಸೂದೆ ತರಲಾಗಿದೆ.
ಕನ್ನಡಭಾಷೆ ಮಾತನಾಡುವ ಕಾಸರಗೋಡು ಮತ್ತು ಕೇರಳದ ಇನ್ನಿತರ ಪ್ರದೇಶಗಳಲ್ಲಿ, ವಿದ್ಯಾರ್ಥಿಗಳು ತಮ್ಮ ಮೊದಲ ಭಾಷೆಯಾಗಿ ಕನ್ನಡವನ್ನು ಮತ್ತು ಎರಡನೇ ಭಾಷೆಯಾಗಿ ಮತ್ತೊಂದು ಭಾಷೆಯನ್ನು ಅಧ್ಯಯನ ಮಾಡುತ್ತಿದ್ದಾರೆ. ಇದು ವಿದ್ಯಾರ್ಥಿಗಳು ಹಿಂದಿ ಅಥವಾ ಸಂಸ್ಕೃತ ಅಥವಾ ಉರ್ದುವನ್ನು ಎರಡನೇ ಭಾಷೆಯಾಗಿ ಆಯ್ಕೆಮಾಡಲು ಸಹಾಯಮಾಡುತ್ತದೆ. ಈ ಬಿಲ್ ಅಂಗೀಕರಿಸಿದರೆ, ಕನ್ನಡ ವಿದ್ಯಾರ್ಥಿಗಳು ಮಲಯಾಳಂ ಭಾಷೆಯನ್ನು ತಿಳಿಯದಿದ್ದರೂ ಒತ್ತಾಯಪೂರ್ವಕವಾಗಿ ಕಲಿಯಬೇಕಾಗಬಹುದು. ಇದು ಅವರ ಭವಿಷ್ಯಕ್ಕೆ ಮಾರಕವಾಗುತ್ತದೆ. ವಿಶೇಷವಾಗಿ ದೇಶದ ಇತರ ಭಾಗಗಳಲ್ಲಿ ಈ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರಿಸಿದರೆ, ಅವರಿಗೆ ಸಂಪೂರ್ಣ ಹೊಡೆತ ಬೀಳಲಿದೆ. ಈ ಬಿಲ್ ಕಾಸರಗೋಡು ಜಿಲ್ಲೆಯಲ್ಲಿ, ಜಾರಿಗೆ ಬಂದರೆ, ಇದರ ಪರಿಣಾಮಗಳು ವಿಪರೀತವಾಗಲಿದ್ದು, ಕನ್ನಡ ಭಾಷೆಗೆ ಮತ್ತು ಶತಮಾನಗಳಿಂದ ಕನ್ನಡವನ್ನು ಮಾತೃಭಾಷೆಯಾಗಿ ಬಳಸಿಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾರಕವಾಗಲಿದೆ. ಆದ್ದರಿಂದ ಕೇರಳ ಸರ್ಕಾರದ ಭಾಷಾ ವಿಧೇಯಕ 2025 ಅನ್ನು ತಿರಸ್ಕರಿಸಲು ಅಥವಾ ಮರು ಪರಿಶೀಲಿಸಲು ಮಾನ್ಯ ಕೇರಳ ರಾಜ್ಯಪಾಲರನ್ನು ಭೇಟಿ ಮಾಡಿ ವಿನಂತಿಸಲಾಗಿದೆ. ಏಕೆಂದರೆ ಇದು ಪೂರ್ಣವಾಗಿ ಕಾಸರಗೋಡು ಜಿಲ್ಲೆಯ ಕನ್ನಡ ಭಾಷಾ ಅಲ್ಪಸಂಖ್ಯಾತರಿಗೆ ನೀಡಲಾದ ಸಂವಿಧಾನಾತ್ಮಕ ನಿರ್ಧಾರಗಳನ್ನು ಉಲ್ಲಂಘಿಸಿದಂತಾಗುತ್ತದೆ.
ಈ ಸಂದರ್ಭ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಎ.ಆರ್. ಸುಬ್ಬಯ್ಯಕಟ್ಟೆ, ತೆಕ್ಕೆಕೆರೆ ಶಂಕರನಾರಾಯಣ ಭಟ್, ಕೇರಳ ಕಸಾಪ ಅಧ್ಯಕ್ಷ, ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಸಮಿತಿಯ ಮುರಳೀಧರ ಬಲ್ಲುಕರಾಯ, ಕೇರಳ ಪ್ರಾಂತ್ಯ ಅಧ್ಯಾಪಕರ ಸಂಘದ ಅಧ್ಯಕ್ಷ ಸುಖೇಶ್. ಎ ಮುಂತಾದ ಕಾಸರಗೋಡಿನ ಕನ್ನಡಿಗರು ಸೇರಿ ಕೇರಳ ಸರ್ಕಾರದ ಮಾನ್ಯ ರಾಜ್ಯಪಾಲರಾದ ಶ್ರೀ ರಾಜೇಂದ್ರ ವಿಶ್ವನಾಥ್ ಹಾರ್ಡೆಕರ್ಜೆರವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಕಾಸರಗೋಡಿನ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳ ಕುರಿತಂತೆ ಮೇಲಿನ ವಿಷಯಗಳನ್ನು ಮಾನ್ಯ ರಾಜ್ಯಪಾಲರ ಗಮನಕ್ಕೆ ತಂದು ಈ ಕುರಿತಂತೆ ಮನವಿಯನ್ನು ಸಲ್ಲಿಸಲಾಯಿತು. ಮಾನ್ಯ ರಾಜ್ಯಪಾಲರು ಈ ಬಗ್ಗೆ ಬಿಲ್ಲನ್ನು ತಡೆಹಿಡಿಯಲಾಗಿದ್ದು ಸಂಪೂರ್ಣ ಪರಿಶೀಲನೆ ಮಾಡಿ ಕಾಸರಗೋಡು ಕನ್ನಡಿಗರ ಹಿತ ಕಾಯುವುದಾಗಿ ನಿಯೋಗಕ್ಕೆ ಆಶ್ವಾಸನೆ ನೀಡಿದರು.

0 Comments