ಬಂಟ್ವಾಳ : ಕ್ರಿಸ್ಮಸ್ ಆಚರಣೆಯ ಸಂದರ್ಭ ಕಾಮಜಾಲು ಶಾಲೆಯಲ್ಲಿ ಕಾಮಜಾಲು ಫ್ರೆಂಡ್ಸ್ ಕ್ಲಬ್ ಎಂಬ ಮಾಣಿಲದ ಸಂಘಟನೆಯೊಂದು ಆಯೋಜಿಸಿದ ಲಕ್ಕಿ ಡ್ರಾದಲ್ಲಿ ವಿಜೇತವಾದ ಬಹುಮಾನದ ನಗದನ್ನು
ಸಾರ್ವಜನಿಕ ಆಂಬ್ಯುಲೆನ್ಸ್ ಖರೀದಿಗೆ ದೇಣಿಗೆಯಾಗಿಸಿ ವಿಜೇತರೊಬ್ಬರು ಮಾದರಿಯಾಗಿದ್ದಾರೆ.ಯೋಜನೆಯ ಮೊದಲ ಡ್ರಾದ ಹತ್ತು ಸಾವಿರ ರೂಪಾಯಿ ನಗದು ಬಹುಮಾನವನ್ನು ದಿವಿನ್ ಪುಣಿಚಿತ್ತಾಯರ ಬೈಲು ಅವರು ಪಡೆದಿದ್ದರು.
ಈ ಬಹುಮಾನದ ಮೊತ್ತವನ್ನು ಯಾವುದೇ ವೈಯಕ್ತಿಕ ಉಪಯೋಗಕ್ಕೆ ಬಳಸದೇ, ಸಮಾಜದ ಹಿತದೃಷ್ಟಿಯಿಂದ ಹಾಗೂ ಮಾನವೀಯ ಸೇವಾಭಾವದಿಂದ ಮಾಣಿಲ ಗ್ರಾಮದ ಸಾರ್ವಜನಿಕರಿಗಾಗಿ ಆಂಬ್ಯುಲೆನ್ಸ್ ಖರೀದಿಗೆ ದೇಣಿಗೆಯಾಗಿ ನೀಡಿ ಆದರ್ಶರಾಗಿದ್ದಾರೆ. ದಿವಿನ್ ಅವರ ಮಾವನಾದ ನರ್ಸಪ್ಪ ಬಾಳೆಕಲ್ಲು, ಇವರು ಕೆಎಫ್‌ಸಿ ಮಾಣಿಲ ಸಂಘದ ಗೌರವಾನ್ವಿತ ಸದಸ್ಯರಾಗಿದ್ದು ಇವರ ಮಾರ್ಗದರ್ಶನದಲ್ಲಿ ಸಾಮಾಜಿಕ ಸೇವಾ ಕೈಂಕರ್ಯಕ್ಕೆ ವಿನಿಯೋಗಿಸಿರುವುದು ಅತ್ಯಂತ ಶ್ಲಾಘನೀಯ ಮತ್ತು ಮಾದರಿಯೋಗ್ಯ ಸಾಮಾಜಿಕ ಸೇವೆಯಾಗಿದೆ ಎಂದು ಎಲ್ಲರು ಪ್ರಶಂಸಿದರು.
ಇವರ ಈ ಉದಾತ್ತ ಕಾರ್ಯವು ನಮ್ಮ ಸಂಘದ ಮೌಲ್ಯಗಳನ್ನು ಪ್ರತಿಬಿಂಬಿಸುವುದರೊಂದಿಗೆ, ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತದೆ.ಇಂತಹ ಸೇವಾಭಾವನೆ ಹೊಂದಿದ ಸದಸ್ಯರನ್ನು ಹೊಂದಿರುವುದು ಕೆಎಫ್‌ಸಿ (ರಿ.) ಮಾಣಿಲ ಸಂಘಕ್ಕೆ ಮಹತ್ತರವಾದ ಹೆಮ್ಮೆ ಎಂದು ಸಂಘಟನೆಯ ಮಾರ್ಗದರ್ಶಕ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ನುಡಿದಿದ್ದಾರೆ.
ಈ ಅಮೂಲ್ಯ ಸಹಕಾರ, ಸಾಮಾಜಿಕ ಬದ್ಧತೆ ಹಾಗೂ ಮಾನವೀಯತೆಯನ್ನು ಕೆಎಫ್‌ಸಿ ಮಾಣಿಲ ಸಂಘವು ಅಭಿನಂದಿಸಿದೆ.


0 Comments