ಯುವಕನೊಬ್ಬ ಪ್ರೀತಿಸುವಂತೆ ಒತ್ತಾಯಿಸಿ, ಮದುವೆ ಆಗುವಂತೆ ಪೀಡಿಸಿ, ಮಾನಸಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೋರ್ವೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಂಜನಗೂಡಿನ ನೀಲಕಂಠನಗರದಲ್ಲಿ ನಡೆದಿದೆ. ನಂಜನಗೂಡಿನ ಸರ್ಕಾರಿ ಕಾಲೇಜಿನ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿನಿ ದಿವ್ಯ(17) ಮೃತ ದುರ್ದೈವಿ. ದೇಬೂರು ಗ್ರಾಮದ ಆದಿತ್ಯ ಎಂಬ ಯುವಕನ ವಿರುದ್ಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿವ್ಯಳ ಹಿಂದೆ ಆದಿತ್ಯ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದಾನೆ. ಆದಿತ್ಯನ ಪ್ರೀತಿಯನ್ನು ದಿವ್ಯಾ ತಿರಸ್ಕರಿಸಿದ್ದಾಳೆ. ಅಲ್ಲದೆ ಆದಿತ್ಯ ನೀಡುತ್ತಿದ್ದ ಕಿರುಕುಳದ ಬಗ್ಗೆ ಪೋಷಕರ ಗಮನಕ್ಕೆ ತಂದಿದ್ದಾಳೆ. ಹುಡುಗನಿಗೆ ಬುದ್ದಿ ಹೇಳುವಂತೆ ದಿವ್ಯಾಳ ತಂದೆ ಗುರುಮೂರ್ತಿ ಹಲವರ ಗಮನಕ್ಕೆ ತಂದಿದ್ದರು. ಹೀಗಿದ್ದೂ ಆದಿತ್ಯ ತನ್ನ ವರ್ತನೆ ಬದಲಿಸಿಕೊಳ್ಳದ ಹಿನ್ನೆಲೆಯಲ್ಲಿ ಮನನೊಂದ ದಿವ್ಯಾ ತನ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಆದಿತ್ಯಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಗುರುಮೂರ್ತಿ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

0 Comments