ಕಾಸರಗೋಡು: ಮಲಬಾರಿನ ತೀಯ ಸಮುದಾಯವನ್ನು ಸ್ವತಂತ್ರ ಜಾತಿಯನ್ನಾಗಿ ಘೋಷಿಸಬೇಕು ಮತ್ತು ಅರ್ಹವಾಗಿದ್ದು ಕಸಿಯಲ್ಪಟ್ಟ ಹಕ್ಕು, ಸೌಲಭ್ಯಗಳನ್ನು ನ್ಯಾಯೋಚಿತವಾಗಿ ಪುನರ್ ಒದಗಿಸಬೇಕು ಮುಂತಾದ ಹಲವು ಬೇಡಿಕೆಗಳೊಂದಿಗೆ ತೀಯ ಸಮುದಾಯ ಹಕ್ಕು ಘೋಷಣಾ ಉತ್ತರ ವಲಯ ಯಾತ್ರೆ ಜ. 25ರಿಂದ 28ರ ತನಕ ನಡೆಯಲಿದೆ. ಜನವರಿ 25ರಂದು ಬೆಳಿಗ್ಗೆ 9ಕ್ಕೆ ಕುಂಬಳೆ ಶ್ರೀ ನಿತ್ಯಾನಂದ ಮಠದಿಂದ ಹೊರಡುವ ಯಾತ್ರೆ ಮಂಜೇಶ್ವರ, ಕಾಸರಗೋಡು, ಉದುಮ, ಕಾಞಂಗಾಡು, ಪಯ್ಯನ್ನೂರು ಮೊದಲಾದ ವಿಧಾನಸಭಾ ಮಂಡಲ ಪರ್ಯಟನೆ ನಡೆಸಿ 28ರಂದು ಅಪರಾಹ್ನ 5ಕ್ಕೆ ತ್ರಿಕರಿಪುರದಲ್ಲಿ ಸಮಾಪ್ತಿಯಾಗಲಿದೆ.
ತೀಯ ಸಮಾಜದ ಮೊದಲ ಹಕ್ಕು ಘೋಷಣಾ ಯಾತ್ರೆ ಇದಾಗಿದ್ದು, ತೀಯ ಕ್ಷೇಮ ಸಭಾ ರಾಜ್ಯ ಅಧ್ಯಕ್ಷ ರವಿ ಕುಳಂಗರ ನೇತೃತ್ವ ನೀಡುವರು. ಕುಂಬಳೆಯಿಂದ ಹೊರಡುವ ಯಾತ್ರೆಯನ್ನು ತೀಯ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಉದ್ಘಾಟಿಸುವರು. ಅತ್ಯುತ್ತರ ಕೇರಳದ 25ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಸ್ವಾಧೀನ ಶಕ್ತಿ ಹೊಂದಿದ ತೀಯ ಸಮುದಾಯ ಸಾಮುದಾಯಿಕ ಪ್ರಜ್ಞೆಯಿಂದ ಸಂಘಟಿತವಾಗಲೇಬೇಕಾದ ಅನಿವಾರ್ಯತೆಯ ಕಾಲಘಟ್ಟದಲ್ಲಿದೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡ ಯಾತ್ರೆಯಲ್ಲಿ ಸಮುದಾಯದವರು ಪಾಲ್ಗೊಂಡು ಸರಕಾರದ ಗಮನ ಸೆಳೆಯಬೇಕೆಂದು ಒತ್ತಾಯಿಸಲಾಗಿದೆ. ಈ ಸಂಬಂಧ ನೀಲೇಶ್ವರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತೀಯ ಕ್ಷೇಮಸಭಾ ನಾಯಕರಾದ ರವಿ ಕುಳಂಗರ, ರಾಘವನ್ ಪಣಿಕರ್, ನಾರಾಯಣನ್ ಮಯ್ಯಲ್, ಸತೀಶನ್ ಕೂವತೊಟ್ಟಿ, ಗಣೇಶ್ ಪಾವೂರ್, ನಾಗೇಶ್ ಕುಂಬಳೆ ಮೊದಲಾದವರು ಪಾಲ್ಗೊಂಡರು.

0 Comments