ದಿನ ವಿಶೇಷ | ಜನವರಿ 10 ವಿಶ್ವ ಹಿಂದಿ ಭಾಷಾ ದಿನ
ಭಾಷೆಯು ಕೇವಲ ಸಂವಹನದ ಮಾಧ್ಯಮವಲ್ಲ, ಅದು ಒಂದು ಸಂಸ್ಕೃತಿಯ ಕನ್ನಡಿ. ಭಾರತದ ಬಹುತ್ವದ ಸಂಸ್ಕೃತಿಯಲ್ಲಿ ಹಿಂದಿ ಭಾಷೆಯು ಪ್ರಮುಖ ಸ್ಥಾನವನ್ನು ಪಡೆದಿದೆ. ಭಾರತೀಯ ಚಿಂತನೆಗಳನ್ನು ಜಗತ್ತಿಗೆ ತಲುಪಿಸುವ ವಾಹಕವಾಗಿ ಇಂದು ಹಿಂದಿ ಬೆಳೆದು ನಿಂತಿದೆ. ಭಾರತದ ಗಡಿಯಾಚೆಗೂ ಹರಡಿರುವ ಹಿಂದಿ ಭಾಷೆಯ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಸಾರಲು ಮತ್ತು ಅದರ ಬಳಕೆಯನ್ನು ಉತ್ತೇಜಿಸಲು ಪ್ರತಿ ವರ್ಷ ಜನವರಿ 10 ರಂದು 'ವಿಶ್ವ ಹಿಂದಿ ದಿನ'ವನ್ನು ಆಚರಿಸಲಾಗುತ್ತದೆ.
1975 ರ ಜನವರಿ 10 ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಮೊದಲ ಬಾರಿಗೆ 'ವಿಶ್ವ ಹಿಂದಿ ಸಮ್ಮೇಳನ'ವನ್ನು ಆಯೋಜಿಸಲಾಯಿತು. ಈ ಸಮ್ಮೇಳನದಲ್ಲಿ 30 ದೇಶಗಳ 122 ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಐತಿಹಾಸಿಕ ದಿನದ ನೆನಪಿಗಾಗಿ, ಭಾರತೀಯ ಸಂಸ್ಕೃತಿಯ ರಾಯಭಾರಿಯಂತೆ ಕೆಲಸ ಮಾಡುವ ಹಿಂದಿ ಭಾಷೆಗೆ ಅಂತರಾಷ್ಟ್ರೀಯ ಗೌರವ ನೀಡುವ ಸಲುವಾಗಿ 2006 ರಲ್ಲಿ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಜನವರಿ 10 ರಂದು 'ವಿಶ್ವ ಹಿಂದಿ ದಿನ' ಎಂದು ಘೋಷಿಸಿದರು. ಅಂದಿನಿಂದ ಇಂದಿನವರೆಗೆ ಪ್ರತಿವರ್ಷ ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿಸುತ್ತಿವೆ.
ವಿಶ್ವಸಂಸ್ಥೆಯಂತಹ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಹಿಂದಿ ಭಾಷೆಗೆ ಸ್ಥಾನಮಾನ ದೊರಕಿಸುವುದು. ಭಾರತದ ಹೊರಗಿನ ದೇಶಗಳಲ್ಲಿ ಹಿಂದಿ ಕಲಿಕೆಯನ್ನು ಉತ್ತೇಜಿಸುವುದು. ಹಿಂದಿ ಭಾಷೆಯ ಮೂಲಕ ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.
ಇಂದು ಹಿಂದಿ ಭಾಷೆಯು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಇಂಗ್ಲಿಷ್ ಮತ್ತು ಮ್ಯಾಂಡರಿನ್ ನಂತರ ಹಿಂದಿ 3ನೇ ಸ್ಥಾನದಲ್ಲಿದೆ. ವಿಶ್ವದಲ್ಲಿ ಅತಿ ಹೆಚ್ಚು ಜನರು ಮಾತನಾಡುವ ಮೂರನೇ ಭಾಷೆ ಹಿಂದಿಯಾಗಿದೆ. ಮಾರಿಷಸ್, ಫಿಜಿ, ಸುರಿನಾಮ್, ಗಯಾನಾ, ಟ್ರಿನಿಡಾಡ್ ಮತ್ತು ಟೊಬಾಗೊದಂತಹ ದೇಶಗಳಲ್ಲಿ ಹಿಂದಿ ಭಾಷಿಕರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅನೇಕ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಹಿಂದಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಗೂಗಲ್, ಮೈಕ್ರೋಸಾಫ್ಟ್ ಮತ್ತು ಫೇಸ್‌ಬುಕ್‌ನಂತಹ ಜಾಗತಿಕ ತಂತ್ರಜ್ಞಾನ ಸಂಸ್ಥೆಗಳು ಹಿಂದಿ ಭಾಷೆಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಯುಗದಲ್ಲಿ ಹಿಂದಿ ಭಾಷೆಯ ಬಳಕೆ ಡಿಜಿಟಲ್ ಲೋಕದಲ್ಲಿ ಶೇ. 90 ಕ್ಕಿಂತ ಹೆಚ್ಚು ವೇಗದಲ್ಲಿ ವೃದ್ಧಿಸುತ್ತಿದೆ.
ಅನೇಕ ಜನರು ಸೆಪ್ಟೆಂಬರ್ 14 ರಂದು ಆಚರಿಸುವ 'ರಾಷ್ಟ್ರೀಯ ಹಿಂದಿ ದಿನ' ಮತ್ತು ಜನವರಿ 10 ರ 'ವಿಶ್ವ ಹಿಂದಿ ದಿನ'ದ ನಡುವೆ ಗೊಂದಲ ಮಾಡಿಕೊಳ್ಳುತ್ತಾರೆ. ರಾಷ್ಟ್ರೀಯ ಹಿಂದಿ ದಿನವು ಭಾರತದೊಳಗೆ ಹಿಂದಿಯನ್ನು ಆಡಳಿತ ಭಾಷೆಯಾಗಿ ಅಂಗೀಕರಿಸಿದ ನೆನಪಿಗಾಗಿ ಆಚರಿಸಲಾಗುತ್ತದೆ. ಆದರೆ, ವಿಶ್ವ ಹಿಂದಿ ದಿನವು ಜಾಗತಿಕ ವೇದಿಕೆಯಲ್ಲಿ ಭಾಷೆಯ ಅಭಿವೃದ್ಧಿಗೆ ಒತ್ತು ನೀಡುತ್ತದೆ. 2026ರ ಹಿಂದಿ ದಿನಾಚರಣೆಯು "ಹಿಂದಿ: ಒಂದು ಭಾವನಾತ್ಮಕ ಕೊಂಡಿ" ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲ್ಪಡುತ್ತಿದೆ. ತಲೆಮಾರುಗಳನ್ನು ಮತ್ತು ವಿಭಿನ್ನ ಸಮುದಾಯಗಳನ್ನು ಭಾವನಾತ್ಮಕವಾಗಿ ಬೆಸೆಯುವ ಹಿಂದಿ ಭಾಷೆಯ ಶಕ್ತಿಯನ್ನು ಇದು ಎತ್ತಿ ತೋರಿಸುತ್ತದೆ. ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಹಿಂದಿ ಭಾಷೆಯು ಡಿಜಿಟಲ್ ಲೋಕದಲ್ಲೂ ವೇಗವಾಗಿ ಬೆಳೆಯುತ್ತಿದೆ.
"ಭಾಷೆಗಳು ಜನರನ್ನು ಜೋಡಿಸುವ ಸೇತುವೆಗಳು" ಎನ್ನಬಹುದು. ಭಾಷೆಯ ಮೇಲಿನ ಪ್ರೇಮವು ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಅದರ ಬೆಳವಣಿಗೆಗೆ ನಿರಂತರ ಪ್ರಯತ್ನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿಶ್ವ ಹಿಂದಿ ದಿನಾಚರಣೆಯು ಔಚಿತ್ಯಪೂರ್ಣವಾಗಿದೆ.
ಲೇಖನ ಸಂಗ್ರಹ : ವನಜಾಕ್ಷಿ ಪಿ. ಚೆಂಬ್ರಕಾನ

0 Comments