ಪೆರ್ಲ ; ಗೃಹಿಣಿಯನ್ನು ಬೆದರಿಸಿ ನಿರಂತರ ಅತ್ಯಾಚಾರಕ್ಕೊಳಪಡಿಸಿದ ಪ್ರಕರಣದಲ್ಲಿ ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಸಿಪಿಎಂನ ಕುಂಬಳೆ ಏರಿಯಾ ಸಮಿತಿ ಮಾಜಿ ಕಾರ್ಯದರ್ಶಿ ಎಸ್. ಸುಧಾಕರ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ವಿ.ಕೆ. ರಂಜಿತಾ ಅವರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ, ಸಂತ್ರಸ್ತೆಯ ಒಪ್ಪಿಗೆಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಲಾಗಿತ್ತು ಎಂಬ ಸುಧಾಕರ ಅವರ ವಕೀಲರ ವಾದವನ್ನು ತಿರಸ್ಕರಿಸಲಾಗಿದೆ. ನ್ಯಾಯಾಲಯದಲ್ಲಿಸುಧಾಕರ ಅವರ ಬೆದರಿಕೆಯ ಧ್ವನಿ ಸಂದೇಶಗಳು ಮತ್ತು ಸಾಕ್ಷ್ಯಗಳನ್ನು ಹೊಂದಿರುವ ಪೆನ್ ಡ್ರೈವ್ ಅನ್ನು ಹಾಜರುಪಡಿಸಲಾಗಿತ್ತು. 28 ವರ್ಷಗಳ ಕಾಲ ತನ್ನನ್ನು ಬೆದರಿಸಿ ಅತ್ಯಾಚಾರ ಮಾಡಿ ವಿವಾಹ ವಿಚ್ಛೇದನ ಮಾಡಿಸಿದ್ದಾರೆ ಎಂಬ ಸಂತ್ರಸ್ತೆಯ ದೂರಿನ ಮೇರೆಗೆ ಕಾಸರಗೋಡು ಮಹಿಳಾ ಪೊಲೀಸರು ಕಳೆದ ತಿಂಗಳು 12 ರಂದು ಸುಧಾಕರ ಕೆ. ವಿರುದ್ಧ ಪ್ರಕರಣ ದಾಖಲಿಸಿದ್ದರು. ದೂರು ದಾಖಲಾದ ತಕ್ಷಣ ಸಿಪಿಎಂ ಸುಧಾಕರ ಅವರನ್ನು ಕಾಟುಕುಕ್ಕೆ ಪ್ರಾದೇಶಿಕ ಸಮಿತಿ ಸದಸ್ಯತ್ವದಿಂದ ತೆಗೆದು ಹಾಕಿತ್ತು. ಕಳತ್ತೂರಿನಲ್ಲಿರುವ ಶಾಲೆಯೊಂದರಲ್ಲಿ ಶಿಕ್ಷಕರಾಗಿರುವ ಸುಧಾಕರ್ ಅವರು ಅಡ್ಕಸ್ಥಳದಲ್ಲಿರುವ ಸಹಕಾರಿ ಸಂಘದ ಅಧ್ಯಕ್ಷ ಹುದ್ದೆಗೂ ರಾಜೀನಾಮೆ ನೀಡಿದ್ದರು. ಎಣ್ಮಕಜೆ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿರುವ ಸುಧಾಕರ್ ಕಳೆದ 4 ಬೋರ್ಡ್ ಸಭೆಗಳಿಗೆ ಹಾಜರಾಗಿಲ್ಲ ಎಂದು ತಿಳಿದು ಬಂದಿದೆ.

0 Comments