Ticker

6/recent/ticker-posts

Ad Code

ಆನ್‌ಲೈನ್ ಗೇಮಿಂಗ್ ವ್ಯಸನಕ್ಕೆ ಬಲಿ ಬಿದ್ದ ಸಹೋದರಿಯರು ಡೆತ್ ನೋಟ್ ಬರೆದಿಟ್ಟು ಕಟ್ಟಡದಿಂದ ಹಾರಿ ಆತ್ಮಹತ್ಯೆ

 

ಗಾಜಿಯಾಬಾದ್ : ಆನ್‌ಲೈನ್ ಗೇಮಿಂಗ್ ವ್ಯಸನ ಮಕ್ಕಳನ್ನು  ಎಷ್ಟೊಂದು ಬಲಿ ತೆಗೆಯುತ್ತಿದೆ ಎಂಬುದಕ್ಕೆ ಮೂವರು ಸಹೋದರಿಯರು ಕಟ್ಟಡದಿಂದ ಹಾರಿ ಆತ್ಮಹತ್ಯೆಗೈದಿರುವುದೇ ಸಾಕ್ಷಿಯಾಗಿದೆ.  ಆತ್ಮಹತ್ಯೆಗೂ ಮುನ್ನ ಸಹೋದರಿಯರು ಬರೆದಿಟ್ಟ ಸಣ್ಣ ಡೆತ್ ನೋಟ್ ಪತ್ತೆಯಾಗಿದೆ.

ಆನ್‌ಲೈನ್ ಗೇಮಿಂಗ್ ಆಡಬೇಡಿ ಎಂದಿದ್ದಕ್ಕೆ ಉತ್ತರ ಪ್ರದೇಶ ಗಾಜಿಯಾಬಾದ್‌ನಲ್ಲಿ  ಮೂವರು ಅಪ್ರಾಪ್ತ ಸಹೋದರಿಯರು ಹೌಸಿಂಗ್ ಸೊಸೈಟಿಯ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಗಾಜಿಯಾಬಾದ್‌ನ ವಸತಿ ಪಟ್ಟಣವಾದ ಭಾರತ್ ಸಿಟಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿಯರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ಮೂವರು ಸಹೋದರಿಯರೂ ಮೃತಪಟ್ಟಿದ್ದರು. ಘಟನಾ ಸ್ಥಳದಲ್ಲಿ ಸಹೋದರಿಯರು ಬರೆದಿಟ್ಟ ಡೆತ್ ನೋಟೊಂದನ್ನು  ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಮಮ್ಮಿ, ಪಾಪಾ, ಕ್ಷಮಿಸಿ. ಕೊರಿಯನ್ (ಆಟ) ನಮ್ಮ ಜೀವನ. ನೀವು ಅದನ್ನ ಆಡಬೇಡಿ ಎಂದಿರಿ. ನಾವು ಅದನ್ನು ಎಷ್ಟು ಪ್ರೀತಿಸುತ್ತಿದ್ದೆವು ಎಂದು ನಿಮಗೆ ಈಗ ಅರಿವಾಗುತ್ತದೆ. ಈ ಡೈರಿಯಲ್ಲಿ ಏನು ಬರೆದಿದ್ದೇವೋ ಅದನ್ನ ಓದಿ. ಯಾಕೆಂದರೆ ಅದರಲ್ಲಿರುವುದು ಎಲ್ಲವೂ ನಿಜ ಎಂದು ಬರೆಯಲಾಗಿದೆ. 

ಇನ್ನು ಘಟನೆ ಸಂಬಂಧ ಮೃತ ಸಹೋದರಿಯರ ತಂದೆ ಚೇತನ್ ಕುಮಾರ್ ಮಾತನಾಡಿ, ನನ್ನ ಮಕ್ಕಳು ಅಪಾಯಕಾರಿ ಆನ್‌ಲೈನ್ ಆಟದಲ್ಲಿ ಸಿಲುಕಿದ್ದಾರೆ ಎಂಬ ಬಗ್ಗೆ ನನಗೆ ಅರಿವಾಗಿಲ್ಲ. ಇದು ಯಾವ ರೀತಿಯ ಆಟ ಎಂದು ನಮಗೆ ತಿಳಿದಿದ್ದರೆ, ನಾವು ಅವರನ್ನು ಎಂದಿಗೂ ಆಡಲು ಬಿಡುತ್ತಿರಲಿಲ್ಲ. ಕಳೆದ ಎರಡು-ಮೂರು ವರ್ಷಗಳಿಂದ ಈ ಆಟವನ್ನು ಆಡುತ್ತಿದ್ದರು. ಅವರು ಕೊರಿಯಾಗೆ ಹೋಗಲು ಬಯಸುತ್ತಾರೆ ಎಂದು ನನಗೆ ಹೇಳುತ್ತಿದ್ದರು. ನಾನು ಅವರನ್ನು ‘ಯಾಕೆ ಕೊರಿಯಾ?’ ಎಂದು ಪ್ರಶ್ನಿಸಿದ್ದೆ. ಆದರೆ ಇದರ ಬಗ್ಗೆ ಸಣ್ಣ ಅನುಮಾನವೂ ಬರಲಿಲ್ಲ. ಮಂಗಳವಾರ ತಡರಾತ್ರಿ ನೀರು ಕುಡಿಯಲು ಅಡುಗೆಮನೆಗೆ ಹೋಗಬೇಕೆಂದು ನನಗೆ ಹೇಳಿದರು. ಬಳಿಕ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 

ಮೃತ ಬಾಲಕಿಯರನ್ನು ಪಾಖಿ (12), ಪ್ರಾಚಿ (14) ಮತ್ತು ವಿಶಿಕಾ (16) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಕೋವಿಡ್ ಸಮಯದಲ್ಲಿ ಈ ಮೂವರು ಆನ್‌ಲೈನ್ ವೀಡಿಯೋ ಗೇಮ್‌ಗಳಿಗೆ ವ್ಯಸನಿಯಾಗಿದ್ದರು ಎಂದು ವರದಿಯಾಗಿದೆ. ಅವರು ಆನ್‌ಲೈನ್, ಟಾಸ್ಕ್ ಆಧಾರಿತ ಕೊರಿಯನ್ ಲವ್ ಗೇಮ್ ಆಡುತ್ತಿದ್ದರು. ವ್ಯಸನವು ಎಷ್ಟರ ಮಟ್ಟಿಗೆ ತಲುಪಿತ್ತೆಂದರೆ, ಹುಡುಗಿಯರು ಶಾಲೆಗೆ ಹೋಗುವುದನ್ನು ನಿಲ್ಲಿಸಿ, ಹೆಚ್ಚಿನ ಸಮಯವನ್ನು ಆಟದಲ್ಲಿ ಕಳೆಯುತ್ತಿದ್ದರು. ಆತ್ಮಹತ್ಯೆಗೂ ಮುನ್ನ ಸಹೋದರಿಯರು ಕಟ್ಟಡದಿಂದ ಹಾರಲು ಸಣ್ಣ ಏಣಿಗಳನ್ನು ಬಳಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Post a Comment

0 Comments