ಪೆರ್ಲ : ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ ಅಂಗವಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಪುತ್ತೂರು, ನಾಲಂದ ಚಾರಿಟೇಬಲ್ ಟ್ರಸ್ಟ್, ಮಂಥನ ಬದಿಯಡ್ಕ ಗ್ರಾಮ ವಿಕಾಸ ಯೋಜನೆ ಸಹಯೋಗದಲ್ಲಿ ಪೆರ್ಲ ನಾಲಂದ ಕಾಲೇಜಿನಲ್ಲಿ “ವಂದೇ ಮಾತರಂ 150” ಕಾರ್ಯಕ್ರಮ ಆಯೋಜಿಸಲಾಯಿತು.
ಆರ್ ಎಸ್ ಎಸ್ ದಕ್ಷಿಣ ಪ್ರಾಂತ ಪ್ರಚಾರ್ ಪ್ರಮುಖ್ ರಾಜೇಶ್ ಪದ್ಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಾಷ್ಟ್ರಭಕ್ತಿಯ ಸಂಕೇತವಾಗಿ ಜನರನ್ನು ಏಕತೆಯ ಹಾದಿಯಲ್ಲಿ ಮುನ್ನಡೆಸಿದ 'ವಂದೇ ಮಾತರಂ' ಗೀತೆಯ ಐತಿಹಾಸಿಕ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, 'ವಂದೇ ಮಾತರಂ ಗೀತೆ ಭಾರತೀಯರ ಆತ್ಮ ಸ್ಪಂದನೆಯಾಗಿದೆ. ಯುವಜನತೆ ಈ ರೀತಿಯ ಕಾರ್ಯಕ್ರಮಗಳಿಂದ ರಾಷ್ಟ್ರದ ಇತಿಹಾಸ ಮತ್ತು ಮೌಲ್ಯಗಳನ್ನು ಅರಿತುಕೊಳ್ಳಬೇಕು' ಎಂದು ತಿಳಿಸಿದರು.
ಆರ್ ಎಸ್ ಎಸ್ ದಕ್ಷಿಣ ಪ್ರಾಂತದ ಕಾಸರಗೋಡು ಜಿಲ್ಲಾ ಪ್ರಮುಖ್, ಮಂಥನ ಬದಿಯಡ್ಕ ಸದಸ್ಯ ಬಾಲಕೃಷ್ಣ ನೀರ್ಚಾಲು, ಕಾಲೇಜು ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಿನ್ಸಿಪಾಲ್ ಶಂಕರ ಖಂಡಿಗೆ ಸ್ವಾಗತಿಸಿ, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥೆ ಆಶಾಲತಾ ವಂದಿಸಿದರು. ವಂದೇ ಮಾತರಂ ಗೀತೆಯ ಏಕಕಂಠ ಗಾಯನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

0 Comments