ಲಕ್ನೋ : ರಸ್ತೆಗುಂಡಿಗಳಿಂದಾಗಿ ಉಂಟಾಗುವ ಅಪಘಾತಗಳಿಂದ ಗಾಯಗೊಳ್ಳುವ, ಸಾವನ್ನಪ್ಪುವ ಸುದ್ದಿಗಳು ಸಾಮಾನ್ಯ. ಆದರೆ, ಉತ್ತರ ಪ್ರದೇಶದಲ್ಲಿ ರಸ್ತೆಗುಂಡಿಯಿಂದ ಮಹಿಳೆಯೊಬ್ಬರು ಬದುಕುಳಿದ ಪವಾಡ ಸುದ್ದಿಯೊಂದು ವರದಿಯಾಗಿದೆ.
ಉತ್ತರ ಪ್ರದೇಶದ 50 ವರ್ಷದ ವಿನೀತಾ ಶುಕ್ಲಾ ಎಂಬ ಮಹಿಳೆ ಗಂಭೀರ ಆರೋಗ್ಯ ಸಮಸ್ಯೆಯಿಂದ ಮೆದುಳು ನಿಷ್ಕ್ರಿಯಕ್ಕೀಡಾಗಿದ್ದರು. ಅವರನ್ನು ಮೀರತ್ ನಗರ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಹಲವು ಪರೀಕ್ಷೆ ನಡೆಸಿ ‘ಬ್ರೈನ್ ಡೆಡ್’ ಎಂಬುದಾಗಿ ವರದಿಯನ್ನೂ ಕೊಟ್ಟಿದ್ದರು. ಇದರಿಂದ ಪತಿ ಕುಲ್ದೀಪ್ ಕುಮಾರ್ ಶುಕ್ಲಾ ಪತ್ನಿಯನ್ನು ಫೆ. 24ರಂದು ಆಸ್ಪತ್ರೆಯಿಂದ ಅಂಬುಲೆನ್ಸ್‌ನಲ್ಲಿ ಮನೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ, ಬರೇಲಿ-ಹರಿದ್ವಾರ ರಾಷ್ಟ್ರೀಯ ಹೆದ್ದಾರಿ 74ರಲ್ಲಿ ಅಂಬುಲೆನ್ಸ್ ವೇಗವಾಗಿ ಹೋಗುವಾಗ ರಸ್ತೆಯಲ್ಲಿದ್ದ ದೊಡ್ಡ ಗುಂಡಿಗೆ ಇಳಿದಿದೆ. ಈ ವೇಳೆ, ವಿನೀತಾ ಶುಕ್ಲಾ ದೇಹದಲ್ಲಿ ದೊಡ್ಡಮಟ್ಟದ ಸಂಚಲನ ಉಂಟಾಗಿದೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ಆಕೆಯ ದೇಹದಲ್ಲಿ ಚಲನೆ ಕಾಣಿಸಿಕೊಂಡಿದೆ.
ಕೂಡಲೇ ಎಚ್ಚೆತ್ತುಕೊಂಡ ಮಹಿಳೆಯ ಕುಟುಂಬದವರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿನ ವೈದ್ಯರಿಗೆ ಎಲ್ಲಾ ವಿದ್ಯಮಾನವನ್ನು ವಿವರಿಸಿದ್ದಾರೆ. ವೈದ್ಯರು ಕೂಡಲೇ ಚಿಕಿತ್ಸೆಯನ್ನು ನೀಡಿದ್ದು, ಸಾವಿನ ಅಂಚಿನಲ್ಲಿದ್ದ ವಿನೀತಾ ಬದುಕುಳಿದರು. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ರಸ್ತೆಗುಂಡಿ ಅವರ ಪಾಲಿಗೆ ಜೀವದಾನ ನೀಡಿದೆ.

0 Comments