ಮಂಜೇಶ್ವರ: ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ಲಾನ್ ಫಂಡ್ ಅಡಿಯಲ್ಲಿ ಸುಮಾರು 1.09 ಕೋಟಿ ರೂಪಾಯಿ ವೆಚ್ಚದಲ್ಲಿ ಕಡಂಬಾರು ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಾಣವಾಗಲಿರುವ ಆರು ನೂತನ ತರಗತಿ ಕೊಠಡಿಗಳ ಕಾಮಗಾರಿಗೆ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅವರು ಅಧಿಕೃತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, "ನಮ್ಮ ಸರ್ಕಾರಿ ಶಾಲೆಗಳನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸುವುದು ನಮ್ಮ ಆದ್ಯತೆಯಾಗಿದೆ. ಈ 1.09 ಕೋಟಿ ರೂಪಾಯಿ ಅನುದಾನವು ಕಡಂಬಾರು ಶಾಲೆಯ ಶೈಕ್ಷಣಿಕ ಪರಿಸರವನ್ನು ಬದಲಾಯಿಸಲಿದ್ದು, ಗಡಿನಾಡಿನ ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಕಲಿಕಾ ಕೇಂದ್ರವನ್ನು ಒದಗಿಸಲಿದೆ," ಎಂದು ಆಶಯ ವ್ಯಕ್ತಪಡಿಸಿದರು.
ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಎ. ತಾಜುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್, ಪಿ.ಟಿ.ಎ. ಅಧ್ಯಕ್ಷ ಮೊಯ್ದೀನ್ ಕುಂಞಿ, ಶಾಲಾ ಮುಖ್ಯೋಪಾಧ್ಯಾಯರಾದ ಎಂ. ಅಶೋಕ ಹಾಗೂ ಅಬೂಬಕ್ಕರ್ ಮಾಸ್ಟರ್ ಮೊದಲಾದವರು ಮಾತನಾಡಿದರು. ಹೊಸ ಕಟ್ಟಡದ ನಿರ್ಮಾಣದಿಂದ ಶಾಲೆಯಲ್ಲಿನ ತರಗತಿ ಕೊಠಡಿಗಳ ಕೊರತೆ ನೀಗಲಿದ್ದು, ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೆಚ್ಚಿನ ಅನುಕೂಲವಾಗಲಿದೆ.

0 Comments