ಬದಿಯಡ್ಕ : ಬಹುಮುಖ ಪ್ರತಿಭೆಯ ಎಂ.ಎಸ್. ಶೇಖರ್ ಅವರು ಅಂಬೇಡ್ಕರ್ ತತ್ವಾದರ್ಶಗಳನ್ನು ಪ್ರತಿಪಾದಿಸಿದ್ದ ಚಿಂತಕ - ಸಮಾನ ಮನಸ್ಕರೊಡನೆ ಬದಿಯಡ್ಕ ಕೇಂದ್ರೀಕರಿಸಿ ಅಂಬೇಡ್ಕರ್ ವಿಚಾರ ವೇದಿಕೆಯನ್ನು ಹುಟ್ಟು ಹಾಕಿದ ಅವರು ಯುವಜನತೆಯ ಆಶಾಕಿರಣವಾಗಿದ್ದರು ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಗಂಗಾಧರ ಗೋಳಿಯಡ್ಕ ಹೇಳಿದರು. ಸಮರ್ಥ ಸಂಘಟಕ, ಪ್ರಗತಿಪರ ಚಿಂತಕ, ಸಾಮಾಜಿಕ ಕಾರ್ಯಕರ್ತ ಎಂ.ಎಸ್. ಶೇಖರ್ ಮುರಿಯಂಕೂಡ್ಲು ಅವರ 22ನೇ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ್ ವಿಚಾರ ವೇದಿಕೆಯ ಆಶ್ರಯದಲ್ಲಿ ಪ್ರತಿ ವರ್ಷವೂ ಸಂಸ್ಮರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಈ ಬಾರಿ ನೀರ್ಚಾಲಿನ ಮೇಲಿನ ಪೇಟೆಯಲ್ಲಿ ದಿ. ಕೃಷ್ಣ ದರ್ಬೆತ್ತಡ್ಕ ವೇದಿಕೆಯಲ್ಲಿ ಆಯೋಜಿಸಲಾಗಿತ್ತು. ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ .ಕೆ ಉಳಿಯತ್ತಡ್ಕ ಅವರು ಅಧ್ಯಕ್ಷತೆ ವಹಿಸಿದ್ದರು. ಎಂ.ಎಸ್. ಶೇಖರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಅಂಬೇಡ್ಕರ್ ವಿಚಾರ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ಸಂಸ್ಮರಣಾ ಭಾಷಣ ಮಾಡಿದರು. ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಪೂರ್ವಾಧ್ಯಕ್ಷ ಹರೀಶ್ಚಂದ್ರ ಪುತ್ತಿಗೆ, ಕಲಾವಿದ ಶಂಕರ್ ಸ್ವಾಮಿಕೃಪಾ , ಎಂ.ಎಸ್ . ಶೇಖರ್ ಅವರ ಸಹೋದರ ಬಾಲಕೃಷ್ಣ ಮುರಿಯಂಕೂಡ್ಲು ಭಾಗವಹಿಸಿದ್ದರು. ವಿಚಾರ ವೇದಿಕೆಯ ಕಾರ್ಯದರ್ಶಿ ಸುಂದರ ಬಾರಡ್ಕ ಸ್ವಾಗತಿಸಿ, ಅಧ್ಯಕ್ಷ ರಾಮ ಪಟ್ಟಾಜೆ ವಂದಿಸಿದರು.

0 Comments