ಧಾರವಾಡ: ಮನೆಯಲ್ಲಿ ಸಂಗ್ರಹ ಮಾಡಿದ್ದ ಪೆಟ್ರೋಲ್ ಕ್ಯಾನ್‌ಗೆ ಬೆಂಕಿ ತಗುಲಿದ ಪರಿಣಾಮ ಗೃಹಿಣಿಯೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಪೂರ್ಣಿಮಾ ಕಲ್ಲಪ್ಪ ಹಾದಿಮನಿ (32) ಎಂಬ ಗೃಹಿಣಿ ತೀವ್ರವಾಗಿ ಗಾಯಗೊಂಡಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿ ಕಿಮ್ಸ್‌ನಲ್ಲಿ ದಾಖಲಿಸಲಾಗಿದೆ.
ಪೆಟ್ರೋಲ್ ಅಭಾವ ಆಗಿದೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಪೆಟ್ರೋಲ್‌ನ್ನು ಕ್ಯಾನ್‌ನಲ್ಲಿ ಸಂಗ್ರಹಿಸಿ, ಮನೆಯ ಫ್ರಿಡ್ಜ್ ಬಳಿ ಇಡಲಾಗಿತ್ತು. ಪೂರ್ಣಿಮಾ ಅಡುಗೆ ಮನೆಯಲ್ಲಿದ್ದಾಗ ಏಕಾಏಕಿ ಕ್ಯಾನ್‌ಗೆ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದ್ದು, ಇಡೀ ಮನೆಗೆ ಬೆಂಕಿ ಆವರಿಸಿದೆ.
ಅಡುಗೆ ಮನೆಯಲ್ಲಿ ಸಿಲುಕಿದ್ದ ಪೂರ್ಣಿಮಾರನ್ನು ಮೈದುನ ಯಲ್ಲಪ್ಪ ಕಾಪಾಡಿದ್ದು, ಈ ವೇಳೆ ಅವನಿಗೂ ಗಾಯಗಳಾಗಿವೆ. ಆದರೆ ಮಹಿಳೆಯ ಸ್ಥಿತಿ ಮಾತ್ರ ಗಂಭೀರವಾಗಿದೆ. ಈ ವೇಳೆ ಮನೆಯ ಸದಸ್ಯರು ಹೊರಗಡೆ ಕುಳಿತಿದ್ದರಿಂದ ಪಾರಾಗಿದ್ದಾರೆ. ಅಗ್ನಿ ಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿದ್ದಾರೆ. ಮದುವೆ ಕಾರ್ಯಕ್ರಮಗಳಿಗೆ ರಥ ಓಡಿಸಲು ಇವರು ಪೆಟ್ರೋಲ್ ಸ್ಟಾಕ್ ಮಾಡಿದ್ದರು ಎಂದು ತಿಳಿದು ಬಂದಿದೆ. ಗರಗ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

0 Comments