ಕೋಝಿಕ್ಕೋಡ್ : ಸಾಮಾಜಿಕ ಜಾಲತಾಣಗಳಲ್ಲಿ ಯುವಕರನ್ನು ಆಕರ್ಷಿಸುತ್ತಿದ್ದ ಇನ್ ಫ್ಲೂಯೆನ್ಸರ್ ಫಾತಿಮಾ ನಸ್ರಿನ್ ಅವರನ್ನು ಮಾದಕವಸ್ತು ಪ್ರಕರಣದಲ್ಲಿ ಬಂಧಿಸಲಾಗಿದೆ. ಪಂಥಿರಂಕಾವು ಟೋಲ್ ಪ್ಲಾಜಾದಲ್ಲಿ ನಡೆಸಿದ ತಪಾಸಣೆಯ ಸಮಯದಲ್ಲಿ, ಫಾತಿಮಾ ಮತ್ತು ಆಕೆಯ ಸ್ನೇಹಿತ ಕೊಂಡೊಟ್ಟಿ ಮೂಲದ ಶೆಫೀಕ್ ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ಪರಿಶೀಲಿಸಿದಾಗ 3.2ಕಿ.ಗ್ರಾಂ. ಎಂಡಿಎಂಎ ಪತ್ತೆಯಾಗಿದೆ. ಸರಿಸುಮಾರು 96 ಲಕ್ಷ ರೂ. ಮಾರುಕಟ್ಟೆ ಬೆಲೆಯುಳ್ಳ KL 01 CR 3031 ಸಂಖ್ಯೆಯ ಕಾರಿನ ಬಾನೆಟ್‌ನೊಳಗಿನ ಮಳೆ ನೀರಿನ ಸ್ಟ್ಯಾಂಡ್ ನಲ್ಲಿ ಮಾದಕ ವಸ್ತುಗಳನ್ನು ಮರೆಮಾಡಲಾಗಿತ್ತು. ತೊಂಡಯಾಡ್ ಬೈಪಾಸ್‌ನಿಂದ ರಾಮನಾಟ್ಟುಕ್ಕರ ಪ್ರದೇಶಕ್ಕೆ ಹೋಗುವಾಗ ಅವರನ್ನು ಬಂಧಿಸಲಾಯಿತು.
ಕರ್ನಾಟಕದಿಂದ ಮಾದಕ ವಸ್ತುವನ್ನು ತಂದು ಕೋಝಿಕ್ಕೋಡ್ ನಲ್ಲಿ ವಿತರಿಸುತ್ತಿದ್ದ ಅವರ ಮೇಲೆ ಅಬಕಾರಿ ಇಲಾಖೆ ಬಹಳ ಸಮಯದಿಂದ ನಿಗಾ ಇಟ್ಟಿತ್ತು. ಅಬಕಾರಿ ಇನ್ಸ್‌ಪೆಕ್ಟರ್ ಶರತ್ ನೇತೃತ್ವದಲ್ಲಿ ಅಬಕಾರಿ ಇಲಾಖೆ, ಜಾರಿ ಮತ್ತು ಮಾದಕ ದ್ರವ್ಯ ವಿರೋಧಿ ವಿಭಾಗ, ಗುಪ್ತಚರ ದಳ ಮತ್ತು ವಿಶೇಷ ದಳದ ಜಂಟಿ ತಂಡವು ಕಾರ್ಯಾಚರಣೆ ನಡೆಸಿತ್ತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

0 Comments