ಕಾಸರಗೋಡು : ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಕಾರ್ಯಕರ್ತರ ನಿಸ್ವಾರಥ ಸೇವೆಯೇ ಆಧಾರಸ್ತಂಭ. ಆಬಾಲ ವೃದ್ಧರು ಉತ್ಸಾಹದಿಂದ ಇಲ್ಲಿ ಜಗದಂಬಿಕೆಯ ಸೇವೆಯಲ್ಲಿ ತೊಡಗಿಕೊಂಡಿರುವುದು ಇತರರಿಗೆ ಮಾದರಿಯಾಗಿದೆ.
ಇವೆಲ್ಲದರ ಪರಿಣಾಮ ಕಾರ್ಯಕ್ರಮದ ಪ್ರತಿ ಮಜಲೂ ಅಚ್ಚುಕಟ್ಟಾಗಿ ಮುಕ್ತ ಪ್ರಾಮಸೆಗೆ ಪಾತ್ರವಾಗಿದೆ. ದೇವಾಲಯದೊಳಗೆ ನಡೆಯುತ್ತಿರುವ ಚಟುವಟಿಕೆಗಳು, ಸ್ವಾಗತ ಕೇಂದ್ರ, ಕಚೇರಿಯ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ, ಪ್ರಸಾದ ವಿತರಣೆ, ಶ್ರೀ ಸರಸ್ವತಿ ಮಂಟಪದಲ್ಲಿ ನಡೆಯುತ್ತಿರುವ ಸರಣಿ ಭಜನೆಗಳು, ಶ್ರೀ ಮೂಕಾಂಬಿಕಾ ಮಂಟಪದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಭೋಜನದ ವ್ಯವಸ್ಥೆ, ಶುಚೀಕರಣದ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ,ಧ್ವನಿ ಮತ್ತು ಬೆಳಕಿನ ವ್ಯವಸ್ಥೆ....ಹೀಗೆ ಎಲ್ಲವೂ ಸ್ವಚ್ಛ,ಸುಂದರ, ಸುಗಮ.
ಇವೆಲ್ಲ ವಿಚಾರಗಳ ಹಿಂದೆ ಬಹಳದೊಡ್ಡ ನಾಯಕತ್ವದ ಶಕ್ತಿ ನೇತೃತ್ವ ವಹಿಸಿಕೊಂಡಿದೆ. ದೇವಾಲಯದ ಆಗುಹೋಗುಗಳಿಗೆ ಹೆಗಲು ನೀಡುತ್ತಿರುವ ದೈವೈಕ್ಯ ಮಹಾಲಿಂಗ ಪಾತ್ರಿಗಳ ಕುಟುಂಬದ ಮಂದಿ, ಸಂಬಂಧಿಗಳು ವ್ಯಕ್ತಿಗತ ನೋವು-ನಲಿವುಗಳನ್ನು ಬದಿಗೊತ್ತಿ, ನಗುಮೊಗದಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೊಡಗಿಕೊಂಡಿರುವುದು ಪ್ರಧಾನ ಕಾರಣ.
ತಂತ್ರವರ್ಯ ಶ್ರೀ ಶ್ರೀ ಕೃಷ್ಣ ಗುರೂಜಿ ಅವರ ದಿವ್ಯ ಸಾನ್ನಿಧ್ಯ , ಅವರ ಧಾರ್ಮಿಕ ನೇತೃತ್ವ, ಅವರ ತಂಡ ನಡೆಸಿಕೊಡುತ್ತಿರುವ ಧಾರ್ಮಿಕ ಚಟುವಟಿಕೆಗಳು ಯಶಸ್ಸಿಗೆ ಕಲಶ ಕನ್ನಡಿ ಹಿಡಿದಿದೆ.
ಜೊತೆಗೆ ಈ ಕಾರ್ಯಕ್ರಮಕ್ಕೆ ಆರಂಭದ ಹಂತದಿಂದಲೂ ನಾಯಕತ್ವದಲ್ಲಿ ನೇತಾರರಾಗಿ, ಕಾರ್ಯಕರ್ತರಲ್ಲಿ ಕಾರ್ಯಕರ್ತರಾಗಿ ವಜ್ರಕಂಭದಂತೆ ನಿಂತಿರುವ ಹಿರಿಯ ಧಾರ್ಮಿಕ ಮುಂದಾಳು ಡಾ.ಕೆ.ಎನ್.ವೆಂಕಟ್ರಮಣಹೊಳ್ಳ ಅವರ ಧೀಶಕ್ತಿಯ ಪ್ರಭಾ ಇಡೀ ಸಮರಂಭದಲ್ಲಿ ಅನುರಣಿಸುತ್ತಿದೆ. ಅವರ ಅನುಭವ, ಜ್ಞಾನ, ಅವಿಶ್ರಾಂತ ದುಡಿಮೆ, ನಾಯಕತ್ವದ ಗುಣ ಎಲ್ಲವೂ ಇಲ್ಲಿ ದೊಡ್ಡ ಯೋಗದಾನ ನೀಡಿದೆ. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ ಅವರು ನೀಡುತ್ತಿರುವ ಸೇವೆ ಅನನ್ಯ, ಅನುಪಮ. ಪಟ್ಟೆ ಪೀತಾಂಬರವನ್ನುಟ್ಟರೆ ಧಾರ್ಮಿಕತೆಗೂ ಜೈ....ಪಂಚೆ ಮೇಲೆ ಕಟ್ಟಿ ಹಾರೆ, ಪಿಕ್ಕಾಸು ಹಿಡಿದರೆ ಕಲ್ಲು-ಮಣ್ಣು ಹೊರುವುದಕ್ಕೂ ಜೈ....ಇದು ವೆಂಕಟ್ರಮಣ ಹೊಳ್ಳರು ಜಗತ್ತಿಗೆ ಮಾದರಿಯಾಗುವ ಕ್ರಮ.
ದೇವಾಲಯದ ಮೊಕ್ತೇಸರ ನಾರಾಯಣ ಕಾಳ್ಯಂಗಾಡು, ಧರ್ಮದರ್ಶಿ ನಾರಾಯಣ ಕಾಳ್ಯಂಗಾಡು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಅನಂತ ಕಾಮತ್, ಸಲಹಾ ಸಮಿತಿಯ ರಘು ಕೆ.ಮೀಪುಗುರಿ, ಗೋಪಾಲಕೃಷ್ಣ ವಾಂತಿಚ್ಚಾಲು, ಭಾಸ್ಕರ ಕಾಳ್ಯಂಗಾಡು, ಮೀರಾ ಕಾಮತ್, ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳಕ್ಕೆಬೈಲು, ಕಾರ್ಯದರ್ಶಿಗಳಾದ ರಂಜಿತ್ ಮನ್ನಿಪ್ಪಾಡಿ, ಗೋವಿಂದ ನಾಯ್ಕ್ ಕಾಳ್ಯಂಗಾಡು, ಕೋಶಾಧಿಕಾರಿ ಶಾಂತಕುಮಾರ್ ಮುಂಡಿತ್ತಡ್ಕ, ಜತೆ ಕಾರ್ಯದರ್ಶಿ ಪಿನೀತ್ ಕೆಮ್ಮಣ್ಣು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮೋಹನರಾಜ್ ಕಾಳ್ಯಂಗಾಡು, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್. ಸಹಿತ ಅನೇಕ ಅನೇಕ ಮಂದಿಗಳು, ಮಾತೃ ಸಮಿತಿಯ ಅಧ್ಯಕ್ಷೆ ರಾಧಿಕಾ ರಂಜಿತ್, ಪ್ರಧಾನ ಕಾರ್ಯದರ್ಶಿ ದೀಪಾ ರಾಜೇಶ್ ಸಹಿತ ನೂರಾರು ಮಂದಿ ತಾಯಂದಿರು, ಸಹೋದರಿಯರು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಯಾವ ಫಲಾಪೇಕ್ಷೆಯಿಲ್ಲದೆ ತಮ್ಮೆಲ್ಲ ಕಾಯಕಗಳನ್ನು ಬದಿಗೊತ್ತಿ ಕಾಳ್ಯಂಗಾಡಿನ ತಾಯಿಯ ಸೇವೆಯಲ್ಲಿ ನಿರತರಾಗಿರುವುದು ಇಡೀ ದೇಶಕ್ಕೆ ಒಂದು ಉತ್ತಮ ಮಾದರಿ. ಇವರೆಲ್ಲರ ಪ್ರಭಾವದಿಂದ ಸಾರ್ವಜನಿಕ ವಲಯದಿಂದಲೂ ಅನೇಕ ಮಂದಿ ಯಾವ ಬೇದ-ಭಾವವಿಲ್ಲದೆ ಇಲ್ಲಿ ಸೇವೆಯಲ್ಲಿ ಸ್ವಯಂ ಪ್ರೇರಣೆಯಿಮದ ನಿರತರಾಗಿರುವುದೂ ಸಣ್ಣವಿಚಾರವಲ್ಲ.
ಬರಹ : ವಿ.ಜಿ.ಕಾಸರಗೋಡು (ಹಿರಿಯ ಪತ್ರಕರ್ತರು)
ಫೋಟೋ : ವಸಂತ ಕೆರೆಮನೆ
.jpeg)
.jpeg)



.jpeg)

.jpeg)

0 Comments