Ticker

6/recent/ticker-posts

Ad Code

ಹಿರಿಯ ಸಾಹಿತಿ ಬಿ. ಸತ್ಯವತಿ ಎಸ್. ಭಟ್ ಕೊಳಚಪ್ಪು ಅವರ ಹದಿಮೂರನೆಯ ಕೃತಿ 'ನೀಲಾಂಜನ' ಭಕ್ತಿಗೀತೆ ಸಂಕಲನ ಲೋಕಾರ್ಪಣೆ

 


ಕುಂಬಳೆ :  ಹಿರಿಯ ಸಾಹಿತಿ  ಬಿ ಸತ್ಯವತಿ ಎಸ್ ಭಟ್ ಕೊಳಚಪ್ಪು ಇವರ ಹದಿಮೂರನೆಯ ಕೃತಿ 'ನೀಲಾಂಜನ' ಭಕ್ತಿಗೀತೆಗಳ ಸಂಕಲನ ಮಂಜೇಶ್ವರ ಸಮೀಪದ ಕೊಳಚಪ್ಪು ನಿವಾಸ 'ಸತ್ಯಶ್ರೀ'ಯಲ್ಲಿ ಬಿಡುಗಡೆಯಾಯಿತು. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಇಂಜಿನಿಯರ್ ಬಿ.ಮಹಾಬಲ ತಿಲಕ ಮಂಗಳೂರು ಇವರು ಕೃತಿ ಬಿಡುಗಡೆ ಮಾಡಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ತಾಯಿ ಸಾಧಿಸಿದ ಅಪ್ರತಿಮ ಸಾಧನೆಯ ಕುರಿತು ಅಪಾರ ಸಂತಸ ವ್ಯಕ್ತಪಡಿಸಿದರು. ಹಿರಿಯ ಸಾಹಿತಿ ಮತ್ತು ಸಾಹಿತ್ಯ ಪ್ರವರ್ತಕರಾದ  ಡಾ. ಕೊಳ್ಚಪ್ಪೆ ಗೋವಿಂದ ಭಟ್ ದೀಪ ಪ್ರಜ್ವಲನೆ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬರವಣಿಗೆ ಕ್ಷೇತ್ರದಲ್ಲಿ ಸತ್ಯವತಿ ಭಟ್ ಕೊಳಚಪ್ಪು ಅವರು ಓರ್ವ ವಿಶೇಷ ಪ್ರತಿಭೆ. ಅನೇಕ ಹಿರಿಯ ಕಿರಿಯ ಬರಹಗಾರರ ಸ್ಫೂರ್ತಿಗೆ ಪ್ರೇರಕರಾದವರೆಂದು ಉದ್ಭಾಟನೆಯ ನುಡಿಗಳಲ್ಲಿ ತನ್ನ ಮನದಿಂಗಿತವನ್ನು ಅರುಹಿದರು. ವಿಶ್ರಾಂತ ಪ್ರಾಂಶುಪಾಲರು ಮತ್ತು ಹಿರಿಯ ಸಾಹಿತಿ ಪ್ರೊ.ಪಿ.ಎನ್.ಮೂಡಿತ್ತಾಯರು ಕೃತಿ ಪರಿಚಯ ಮಾಡಿದರು. ಭಕ್ತಿಭಾವದ ತೈಲವನ್ನೆರೆದು ಹಣತೆಯನ್ನು ಹಚ್ಚಿದ ನೀಲಾಂಜನ ಕೃತಿ ಒಂದು ಪರಿಪಕ್ವವಾದ ಭಜನಾ ಸಂಕೀರ್ತನೆಯಾಗಿ ಹೊರಹೊಮ್ಮಿದೆ, ಆ ಮೂಲಕ ಭಕ್ತಿಯಿಂದ ಹಾಡಲು ಯೋಗ್ಯವಾಗಿದೆಯೆಂದು ವಿಶ್ಲೇಷಣೆಗೈದರು. ಕೃತಿಕಾರರಾದ ಬಿ ಸತ್ಯವತಿ ಎಸ್ ಭಟ್ ಕೊಳಚಪ್ಪು ಮಾತನಾಡಿ ತಾಯಿ ಸರಸ್ವತಿಯ ಅನುಗ್ರಹದಿಂದ, ಮಕ್ಕಳು, ಅಳಿಯ, ಸೊಸೆಯಂದಿರ ಸಹಕಾರದಿಂದ, ಬಂಧುಗಳ ಪ್ರೋತ್ಸಾಹದಿಂದ ಸಾಹಿತ್ಯ ಕ್ಷೇತ್ರದಲ್ಲಿ ಒಂದಷ್ಟು ಸಾಧನೆ ಮಾಡಲು ಸಾಧ್ಯವಾಯಿತೆಂದು ಸಂತಸ ವ್ಯಕ್ತಪಡಿಸುತ್ತ, ಸಾಹಿತ್ಯದ ಬೆಳವಣಿಗೆಗೆ ಸಹಕರಿಸಿದ ಸರ್ವರನ್ನೂ ಈ ಸಂದರ್ಭದಲ್ಲಿ ಸ್ಮರಿಸಿದರು. ಹಿರಿಯ ಯಕ್ಷಗಾನ ಅರ್ಥಧಾರಿ ಹಾಗೂ ಸಾಹಿತ್ಯ ದಿಗ್ಗಜರೂ ಆಗಿರುವ ಡಾ.ರಮಾನಂದ ಬನಾರಿಯವರು ಕಾರ್ಯಕ್ರಮದ ಕುರಿತು ವ್ಯಕ್ತಪಡಿಸಿದ ಶುಭದೊಸಗೆಯ ಧ್ವನಿ ಮುದ್ರಣವನ್ನು ಸಭೆಯಲ್ಲಿ ಬಿತ್ತರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಕ.ಸಾ.ಪ. ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಅಧ್ಯಕ್ಷ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿಯವರು ಮಾತನಾಡಿ ಸತ್ಯವತಿ ಅಮ್ಮನವರು ಭಕ್ತಿಭಾವಪರವಶತೆಯಿಂದ ಬರೆದಿರುವ ನೀಲಾಂಜನ ಕೃತಿ ಪ್ರತಿಯೊಂದು ಭಜನಾ ಮಂಡಳಿಗಳಲ್ಲೂ ಹಾಡುವಂತಾಗಬೇಕು, ಅವರಿಂದ ಮತ್ತಷ್ಟು ಕೃತಿಗಳು ಸಾಹಿತ್ಯ ಸರಸ್ವತಿಯ ಮಡಿಲು ಸೇರಬೇಕು, ಸದಾ ಚೈತನ್ಯದ ಚಿಲುಮೆಯಂತಿರುವ ಹಿರಿಯ ಕವಯತ್ರಿಯ ಕೃತಿ ಬಿಡುಗಡೆಯ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರಬೇಕು ಅದನ್ನು ಪ್ರೇಕ್ಷಕನಾಗಿ ಆಸ್ವಾದಿಸುವ ಭಾಗ್ಯವನ್ನು ದೇವರು ಒದಗಿಸಬೇಕು ಎನ್ನುವ ಆಶಯವನ್ನು ವ್ಯಕ್ತಪಡಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅಮ್ಮನ ವಿಶೇಷ ಸಾಧನೆಯನ್ನು ಪರಿಗಣಿಸಿ ಸತ್ಯವತಿ ಭಟ್ ಕೊಳಚಪ್ಪು ಇವರನ್ನು ಮಕ್ಕಳು ಗೌರವಪೂರ್ವಕವಾಗಿ ಸನ್ಮಾನಿಸಿದರು. ಕೃತಿಕಾರರಾದ ಬಿ.ಸತ್ಯವತಿ ಭಟ್ ಕೊಳಚಪ್ಪು ಇವರ ಸಾಹಿತ್ಯ ಕೈಂಕರ್ಯಕ್ಕೆ ಸದಾ ಪ್ರೋತ್ಸಾಹ ನೀಡುತ್ತಿರುವ ಆಪ್ತ ಬಂಧುಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ನೀಲಾಂಜನ ಕೃತಿಯಿಂದ ಆಯ್ದ ಭಕ್ತಿಗೀತೆಗಳಿಗೆ ಸುಶ್ರಾವ್ಯವಾಗಿ ಹಾಡಿದ ಪ್ರಸನ್ನ ಕಾಕುಂಜೆ ಅವರ ಹಾಡುಗಾರಿಕೆಯ ಧ್ವನಿಮುದ್ರಣವನ್ನು ಸಭೆಯಲ್ಲಿ ಪ್ರಸರಿಸಲಾಯಿತು. ಸುಬ್ರಹ್ಮಣ್ಯ ಭಟ್ ಕೊಳಚಪ್ಪುರವರು ಪ್ರಾರ್ಥನೆಗೈದರು.  ಲತೀಶ್ ಎಂ.ಸಂಕೊಳಿಗೆ  ಸ್ವಾಗತಿಸಿ, ಪ್ರಮೀಳಾ ಚುಳ್ಳಿಕಾನ ವಂದಿಸಿದರು. ಹಿರಿಯ ಸಾಹಿತಿ ಮತ್ತು ನಿವೃತ್ತ ಶಿಕ್ಷಕಿ  ಲಕ್ಷ್ಮೀ ವಿ ಭಟ್ ಮಂಜೇಶ್ವರ ಕಾರ್ಯಕ್ರಮ ನಿರೂಪಿಸಿದರು. 


ಸಭಾ ಕಾರ್ಯಕ್ರಮದ ನಂತರ ನಿವೃತ್ತ ಕನ್ನಡ ಅಧ್ಯಾಪಕರು ಕವಿ, ಹಿರಿಯ ಸಾಹಿತಿಯೂ ಆಗಿರುವ  ಗುಣಾಜೆ ರಾಮಚಂದ್ರ ಭಟ್ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ಲಕ್ಷ್ಮೀ ವಿ ಭಟ್ ಮಂಜೇಶ್ವರ,  ಪ್ರಮೀಳಾ ಚುಳ್ಳಿಕಾನ, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಡಾ.ಅಬ್ರಾಜೆ ಕೇಶವ ಭಟ್ ಮತ್ತು  ಸತ್ಯವತಿ ಎಸ್ ಭಟ್ ಕೊಳಚಪ್ಪು ಮುಂತಾದ ಕವಿವರ್ಯರು ಭಾಗವಹಿಸಿ ಭಕ್ತಿಗೀತೆಗಳನ್ನು ವಾಚನ ಮಾಡಿದರು.

Post a Comment

0 Comments