ಮುಂಬೈ: ಆರು ದಶಕಗಳ ಕಾಲ ಬಾಲಿವುಡ್ ಅನ್ನು ಮೋಡಿ ಮಾಡಿದ ನಟ ಧರ್ಮೇಂದ್ರ (89) ಮಧ್ಯಾಹ್ನ 1 ಗಂಟೆ ಸುಮಾರಿಗೆ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾದರು. ತನ್ನ 90ನೇ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ನಟ ಧರ್ಮೇಂದ್ರ ನಿಧನರಾಗಿದ್ದಾರೆ. ಸುಮಾರು 300 ಚಿತ್ರಗಳಲ್ಲಿ ನಟಿಸಿದ್ದಾರೆ. ದೇಶವು ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. 2009 ರಲ್ಲಿ ರಾಜಸ್ಥಾನದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಸಾಮಾಜಿಕ ಸೇವೆಯನ್ನು ಕೈಗೊಂಡಿದ್ದರು. ಕಳೆದ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಧರ್ಮೇಂದ್ರ ಅವರು ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. 1980 ರಲ್ಲಿ ಖ್ಯಾತ ನಟಿ ಹೇಮಾ ಮಾಲಿನಿ ಅವರನ್ನು ಮದುವೆ ಆಗಿದ್ದ ಧರ್ಮೇಂದ್ರ ಅವರು ಅದಕ್ಕಾಗಿ ಇಸ್ಲಾಂ ಧರ್ಮಕ್ಕೂ ಮತಾಂತರಗೊಂಡಿದ್ದರು. ಧರ್ಮೇಂದ್ರ ಅದಕ್ಕೂ ಮುನ್ನ ಪ್ರಕಾಶ್ ಕೌರ್ ಅವರನ್ನು ಮದುವೆಯಾಗಿದ್ದರು. ಇವರ ಮಕ್ಕಳಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್ ಕೂಡ ಬಾಲಿವುಡ್ ಸ್ಟಾರ್ ನಟರಾಗಿದ್ದಾರೆ. ಇಕ್ಕಿಸ್ ಧರ್ಮೇಂದ್ರ ನಟನೆಯ ಕೊನೆಯ ಸಿನಿಮಾ ಆಗಿದ್ದು, ಡಿಸೆಂಬರ್ 25 ರಂದು ಸಿನಿಮಾ ಬಿಡುಗಡೆ ನಡೆಸಲು ಸಿದ್ಧತೆಗಳು ಪೂರ್ಣಗೊಳ್ಳುತ್ತಿರುವ ನಡುವೆ ಧರ್ಮೇಂದ್ರ ಅವರು ತೆರೆಯ ಮರೆಗೆ ಸರಿದಿರುವುದು ಬಾಲಿವುಡ್ ಸಿನಿಮಾ ರಂಗಕ್ಕೆ ಅತ್ಯಂತ ದೊಡ್ಡ ನಷ್ಟವಾಗಿದೆ.

0 Comments