ಪೆರ್ಲ : ಕೇರಳ ಕರ್ನಾಟಕ ಗಡಿ ಹತ್ತಿರದ ಆರ್ಲಪದವು ಪೇಟೆಯಲ್ಲಿ ಮಧ್ಯರಾತ್ರಿ ವೇಳೆ ಪ್ರಾಣಿಯೊಂದು ನಿರಾಂತಕವಾಗಿ ಸಂಚರಿಸುವ ದೃಶ್ಯ ಕಂಡು ಬಂದಿದ್ದು ಇದು ಚಿರತೆ ಮರಿ ಎಂಬ ವದಂತಿ ಹಿನ್ನೆಲೆಯಲ್ಲಿ ನಾಗರಿಕರು ಆತಂಕಗೊಂಡಿದ್ದಾರೆ. ಆರ್ಲಪದವು ಬದ್ರಿಯಾ ಜುಮಾ ಮಸೀದಿಯ ಸಿಸಿ ಟಿವಿಯಲ್ಲಿ ಮಧ್ಯರಾತ್ರಿ 2ಗಂಟೆ ಸುಮಾರಿಗೆ ಚಿರತೆಯನ್ನು ಹೋಲುವಂತಹ ಪ್ರಾಣಿಯೊಂದು ಸಂಚರಿಸುವ ದೃಶ್ಯ ದಾಖಲಾಗಿದೆ. ಈ ಸಿಸಿ ಟಿವಿ ದೃಶ್ಯಗಳು ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದು ಇದೀಗ ವದಂತಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮುಂಜಾಗ್ರತೆ ಕೈಗೊಳ್ಳುವುದಾಗಿ ತಿಳಿಸಿದ್ದು ನಾಗರಿಕರ ಭಯ ದೂರೀಕರಿಸಲು ಪಾಣಾಜೆ ಗ್ರಾ. ಪಂ.ವತಿಯಿಂದ ವಾಹನ ಪ್ರಚಾರದ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ.
ತಿಂಗಳುಗಳ ಹಿಂದೆ ಬೆಳ್ಳೂರು ಗ್ರಾ. ಪಂ. ನ ಬಂಟಾಜೆ ರಕ್ಷಿತಾರಣ್ಯದಲ್ಲಿ ಕೇರಳ ಅರಣ್ಯ ಇಲಾಖೆಯವರು ತಂದು ಉಪೇಕ್ಷಿಸಿದ ಚಿರತೆ ಇದಾಗಿರಬಹುದೆಂದು ನಾಗರಿಕರು ಆರೋಪಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಬೇಡಡ್ಕ ಕೊಳತ್ತೂರಿನಲ್ಲಿ ಬೋನಿಗೆ ಬಿದ್ದು ಸಿಲುಕಿದ ಚಿರತೆಯನ್ನು ರಾತ್ರೋರಾತ್ರಿ ಬೆಳ್ಳೂರಿನ ಬಂಟಾಜೆ ರಕ್ಷಿತಾರಣ್ಯದಲ್ಲಿ ಉಪೇಕ್ಷಿಸಲಾಗಿತ್ತು. ಈ ಸಂದರ್ಭ ಕೇರಳ ಕರ್ನಾಟಕ ಗಡಿ ಪ್ರದೇಶದ ನಾಗರಿಕರು ವಿರೋಧ ಪ್ರಕಟಿಸಿ ಪ್ರತಿಭಟಿಸಿದ್ದರು. ಕಳೆದ ಫೆ. 24ರಂದು ಈ ಘಟನೆ ನಡೆದಿತ್ತು. ಆ ಸಂದರ್ಭ ಪಾಣಾಜೆ ಗ್ರಾ. ಪಂ. ಆತಂಕ ಸೂಚಿಸಿ ಪೋಲೀಸ್ ಮತ್ತು ಅರಣ್ಯ ಇಲಾಖೆಗೆ ದೂರು ನೀಡಿತ್ತು. ಅಂದು ಉಪೇಕ್ಷಿಸಿದ ಚಿರತೆ ಇದೀಗ ಆರ್ಲಪದವಿನಲ್ಲಿ ಮತ್ತೆ ಕಂಡು ಬಂದಿದೆ ಎಂಬುದು ನಾಗರಿಕರ ವಾದವಾಗಿದೆ.

0 Comments